ADVERTISEMENT

ಅಫ್ಗಾನಿಸ್ತಾನ: ಜಂಟಿ ಕಾರ್ಯಪಡೆ ರಚನೆಗೆ ನಿರ್ಧಾರ

ಭಾರತ ಹಾಗೂ ಮಧ್ಯ ಏಷ್ಯಾ ಪ್ರಥಮ ಶೃಂಗಸಭೆ

ಪಿಟಿಐ
Published 27 ಜನವರಿ 2022, 20:47 IST
Last Updated 27 ಜನವರಿ 2022, 20:47 IST
ಮಧ್ಯ ಏಷ್ಯಾದ ಐದು ರಾಷ್ಟ್ರಗಳ ಅಧ್ಯಕ್ಷರೊಂದಿಗೆ ಗುರುವಾರ ನಡೆದ ಪ್ರಥಮ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು –ಪಿಟಿಐ ಚಿತ್ರ
ಮಧ್ಯ ಏಷ್ಯಾದ ಐದು ರಾಷ್ಟ್ರಗಳ ಅಧ್ಯಕ್ಷರೊಂದಿಗೆ ಗುರುವಾರ ನಡೆದ ಪ್ರಥಮ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು –ಪಿಟಿಐ ಚಿತ್ರ   

ನವದೆಹಲಿ: ಅಫ್ಗಾನಿಸ್ತಾನಕ್ಕೆ ಸಂಬಂಧಿಸಿದ ವಿದ್ಯಮಾನಗಳ ಕುರಿತು ಕಾರ್ಯಕ್ರಮ ರೂಪಿಸಿ, ಜಾರಿಗೊಳಿಸುವುದಕ್ಕಾಗಿ ಉನ್ನತ ಅಧಿಕಾರಿಗಳ ಮಟ್ಟದ ಜಂಟಿ ಕಾರ್ಯಪಡೆಯೊಂದನ್ನು ಸ್ಥಾಪಿಸಲು ಭಾರತ ಹಾಗೂ ಮಧ್ಯ ಏಷ್ಯಾದ ಐದು ರಾಷ್ಟ್ರಗಳು ಗುರುವಾರ ನಿರ್ಧರಿಸಿದವು.

ಮಧ್ಯ ಏಷ್ಯಾದ ಐದು ರಾಷ್ಟ್ರಗಳ ಅಧ್ಯಕ್ಷರೊಂದಿಗೆ ನಡೆದ ಮೊದಲ ವರ್ಚುವಲ್ ಶೃಂಗಸಭೆಯಲ್ಲಿಈ ನಿರ್ಣಯ ಕೈಗೊಳ್ಳಲಾಯಿತು ಎಂದು ವಿದೇಶಾಂಗ ಸಚಿವಾಲಯ ಕಾರ್ಯದರ್ಶಿ (ಪಶ್ಚಿಮ) ರೀನತ್‌ ಸಂಧು ಹೇಳಿದ್ದಾರೆ.

‘ಪ್ರತಿ ಎರಡು ವರ್ಷಗಳಿಗೊಮ್ಮೆ ಶೃಂಗಸಭೆಯನ್ನು ಆಯೋಜಿಸಲು ನಾಯಕರು ನಿರ್ಧರಿಸಿದರು. ಮುಂದಿನ ಸಭೆ 2024ರಲ್ಲಿ ನಡೆಯುವ ನಿರೀಕ್ಷೆ ಇದೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

ವರ್ಚುವಲ್‌ ಆಗಿ ನಡೆದ ಈ ಶೃಂಗಸಭೆಯನ್ನು ಭಾರತ ಆಯೋಜಿಸಿತ್ತು. ಕಜಕಸ್ತಾನ ಅಧ್ಯಕ್ಷ ಕಸ್ಸೀಮ್‌ ಜೋಮರ್ಟ್ ತೋಕಯೇವ್, ಶವ್ಕತ್ ಮಿರ್ಜಿಯೋಯೇವ್ (ಉಜ್ಬೇಕಿಸ್ತಾನ), ಎಮೊಮಲಿ ರೆಹಮೋನ್‌ (ತಜಿಕಿಸ್ತಾನ), ಗುರ್ಬಂಗುಲಿ ಬರ್ದಿಮುಹಮೆದೋವ್ ಹಾಗೂ ಕಿರ್ಗಿಸ್ತಾನದ ಅಧ್ಯಕ್ಷ ಸಾದಿರ್ ಜಪಾರೋವ್ ಅವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,‘ ಪ್ರಾದೇಶಿಕತ ಸುರಕ್ಷತೆಗಾಗಿ ಭಾರತ ಹಾಗೂ ಮಧ್ಯ ಏಷ್ಯಾ ರಾಷ್ಟ್ರಗಳ ನಡುವೆ ಸಹಕಾರ ಅಗತ್ಯ. ಅದರಲ್ಲೂ, ಅಫ್ಗಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇದಕ್ಕೆ ಈಗ ಮತ್ತಷ್ಟೂ ಮಹತ್ವ ಇದೆ’ ಎಂದರು.

‘ಮಧ್ಯ ಏಷ್ಯಾ ಹಾಗೂ ಭಾರತದ ನಡುವೆ ಮುಂದಿನ 30 ವರ್ಷಗಳ ಅವಧಿಗೆ ಸಹಕಾರ ಹಾಗೂ ಸಂವಹನ–ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುವುದು ಅಗತ್ಯ’ ಎಂದು ಮೋದಿ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.