ADVERTISEMENT

ಶಾಂತಿ ಕಾಪಾಡಲೆಂದು ಆತ್ಮಗೌರವ ಬಲಿಕೊಡಲು ಆಗದು: ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2018, 9:10 IST
Last Updated 30 ಸೆಪ್ಟೆಂಬರ್ 2018, 9:10 IST
   

ನವದೆಹಲಿ: ಭಾರತ ಶಾಂತಿ ಕಾಪಾಡಲು ಬದ್ಧವಾಗಿದೆ. ಆದರೆ ತನ್ನ ಆತ್ಮಗೌರವ ಮತ್ತು ಸಾರ್ವಭೌಮತ್ವದ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರದ ತಮ್ಮ ‘ಮನ್‌ ಕಿ ಬಾತ್’ ರೇಡಿಯೊ ಭಾಷಣದಲ್ಲಿ ಹೇಳಿದರು.

ಪಾಕ್ ಆಕ್ರಮಿಕ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ದಿನನ ನೆನಪಿಗೆ ನಡೆಸುವ ‘ಪರಾಕ್ರಮ್ ಪರ್ವ್’ ಬಗ್ಗೆ ಅವರು ಮಾತನಾಡಿದರು. ಶತ್ರುವಿಗೆ ತಕ್ಕ ಉತ್ತರ ಕೊಟ್ಟಿದ್ದಕ್ಕಾಗಿ ಯೋಧರನ್ನು ಶ್ಲಾಘಿಸಿದರು.

‘ಪರಾಕ್ರಮ್ ಪರ್ವ್’ ನಮ್ಮ ಸಶಸ್ತ್ರ ಪಡೆಗಳ ಸಮೃದ್ಧ ಪರಂಪರೆಯನ್ನು ನೆನಪಿಸುತ್ತದೆ. ನಮ್ಮ ದೇಶದ ಏಕತೆ ಮತ್ತು ಭದ್ರತೆಯನ್ನು ಕಾಪಾಡಲು ಯುವಕರಿಗೆ ಸ್ಫೂರ್ತಿ ತುಂಬಲಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಧೈರ್ಯವಂತರ ನಾಡು ಎನಿಸಿದ ಜೋಧಪುರದಲ್ಲಿ ನಡೆದ ಅಂಥದ್ದೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ನಾವು ಶಾಂತಿ ಕಾಪಾಡಲು ಬದ್ಧರಾಗಿದ್ದೇವೆ. ಆದರೆ ಅದಕ್ಕಾಗಿ ನಮ್ಮ ಆತ್ಮಗೌರವ ಮತ್ತು ಸ್ವಾಭಿಮಾನವನ್ನು ಕಳೆದುಕೊಳ್ಳಲು ಆಗದು ಎಂದು ಪುನರುಚ್ಚರಿಸಿದರು.

ಮಂಗಳೂರು: ಸುಳ್ಳಾಯ್ತು ಸಂವಾದದ ನಿರೀಕ್ಷೆ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ದೊಡ್ಡ ಪರದೆಯಲ್ಲಿ ವೀಕ್ಷಿಸಲು ಬಿಜೆಪಿ ಜಿಲ್ಲಾ ಘಟಕ ಭಾನುವಾರ ಅನುವು ಮಾಡಿಕೊಟ್ಟಿದ್ದು, ಪ್ರಧಾನಿ ಜೊತೆ ಸಂವಾದಕ್ಕೂ ಅವಕಾಶ ಸಿಗಬಹುದು ಎಂಬ ಹಲವರ ನಿರೀಕ್ಷೆ ಸುಳ್ಳಾಯಿತು.
ಪ್ರಧಾನಿ ಕಚೇರಿ ಸೂಚನೆ ಮೇರೆಗೆ ಮಂಗಳೂರಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ‌ ಮನ್ ಕೀ ಬಾತ್ ಆಲಿಸುವ ಮತ್ತು ದೂರದರ್ಶನದ ಲೈವ್ ನೋಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್ , ಭರತ್ ಶೆಟ್ಟಿ ಹಾಗೂ ಉಮಾನಾಥ ಕೋಟ್ಯಾನ್ ಉಪಸ್ಥಿತರಿದ್ದರು. ಪ್ರಧಾನಿ ಜೊತೆ ಪ್ರಶ್ನೆ ಕೇಳುವ ಉತ್ಸಾಹದಿಂದ ಜಿಲ್ಲೆಯ ವಿವಿಧೆಡೆಯಿಂದ ಜನರು ಬಂದಿದ್ದರು.
ಆದರೆ ಸಂವಾದದ ಅವಕಾಶ ಸಿಗದೇ ಎಲ್ಲರಿಗೂ ನಿರಾಶೆ ಆಯಿತು.

ಅಷ್ಟೇ ಅಲ್ಲ, ದೂರದರ್ಶನದ ಲೈವ್‌ನಲ್ಲಿಯೂ ಮಂಗಳೂರಿನ ಜನತೆಯ ಚಿತ್ರ ಕಾಣಿಸಲಿಲ್ಲ.‌ ‘ತಾಂತ್ರಿಕ ತೊಂದರೆಯಿಂದ ಸಂಪರ್ಕ ಸಾಧ್ಯ ಆಗಿಲ್ಲ. ಮರುಪ್ರಸಾರದಲ್ಲಿ ಜನರ ಕ್ಲಿಪ್ಪಿಂಗ್ ಸೇರಿಸಲು ಪ್ರಯತ್ನಿಸಲಾಗುವುದು’ ಎಂದು ಮಾಜಿ ಶಾಸಕ ಕ್ಯಾ. ಗಣೇಶ್ ಕಾರ್ಣಿಕ್ ಸಮಜಾಯಿಷಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.