ADVERTISEMENT

ಮ್ಯಾನ್ಮಾರ್ ಗಡಿಗೆ ತಡೆ ಬೇಲಿ: ಶಾ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 18:38 IST
Last Updated 6 ಫೆಬ್ರುವರಿ 2024, 18:38 IST
-
-   

ನವದೆಹಲಿ (ಪಿಟಿಐ): ಮ್ಯಾನ್ಮಾರ್ ಜೊತೆಗೆ ಭಾರತ ಹಂಚಿಕೊಂಡಿರುವ 1,643 ಕಿ.ಮೀ ವ್ಯಾಪ್ತಿಯ ಗಡಿಯಲ್ಲಿ ತಡೆ ಬೇಲಿ ಹಾಕಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಘೋಷಿಸಿದ್ದಾರೆ. 

‘ಭಾರತ–ಮ್ಯಾನ್ಮಾರ್ ಗಡಿಯ 1643 ಕಿ.ಮೀ ವಿಸ್ತೀರ್ಣದಲ್ಲಿ ತಡೆ ಬೇಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಮಣಿಪುರದ ಮೊರೆಹ್‌ ಗಡಿಯ 10 ಕಿ.ಮೀ ವ್ಯಾಪ್ತಿಯಲ್ಲಿ ತಡೆಬೇಲಿ ಕಾಮಗಾರಿ ಆರಂಭವಾಗಿದೆ. ಗಡಿಯಾದ್ಯಂತ ಉತ್ತಮ ಕಣ್ಗಾವಲು ವ್ಯವಸ್ಥೆಯನ್ನು ಕಲ್ಪಿಸಲಾಗುವುದು’ ಎಂದು ಅಮಿತ್ ಶಾ ಅವರು ‘ಎಕ್ಸ್’ ವೇದಿಕೆಯಲ್ಲಿ ತಿಳಿಸಿದ್ದಾರೆ. 

ಈ ಕ್ರಮದಿಂದ ಭಾರತ–ಮ್ಯಾನ್ಮಾರ್ ಗಡಿಗಳ 16 ಕಿಲೊ ಮೀಟರ್‌ ವ್ಯಾಪ್ತಿಯಲ್ಲಿ ನೆಲೆಸಿರುವ ಜನರು ಪರಸ್ಪರರ ಭೂಪ್ರದೇಶದೊಳಗೆ ವೀಸಾ ಸೇರಿದಂತೆ ಯಾವುದೇ ದಾಖಲೆಗಳಿಲ್ಲದೆ ಸಂಚಾರಕ್ಕೆ ಅವಕಾಶ ಕಲ್ಪಿಸುವ ಮುಕ್ತ ಸಂಚಾರವನ್ನು (ಎಫ್ಎಂಆರ್) ಅಂತ್ಯಗೊಳಿಸುವ ಸಾಧ್ಯತೆಯಿದೆ. 

ADVERTISEMENT

ಮ್ಯಾನ್ಮಾರ್‌ನ ರಖಾಯಿನ್ ರಾಜ್ಯಕ್ಕೆ ಯಾವುದೇ ಭಾರತೀಯರು ಪ್ರಯಾಣಿಸಕೂಡದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಂಗಳವಾರ ಸೂಚನೆ ನೀಡಿದೆ.

ಬುಡಕಟ್ಟು ಬಂಡುಕೋರರು ಗಡಿಯ ಮೂಲಕ ಭಾರತದೊಳಕ್ಕೆ ಪ್ರವೇಶಿಸುತ್ತಾರೆ. ಜೊತೆಗೆ ಇದೇ ಮಾರ್ಗದಲ್ಲಿ ಮಾದಕ ವಸ್ತುಗಳನ್ನು ಕಳ್ಳಸಾಗಣಿಕೆ ಮಾಡಲಾಗುತ್ತಿದೆ ಎಂದು ಆರೋಪಿಸುವ ಇಂಫಾಲ್ ಕಣಿವೆಯ ಮೈತೇಯಿ ಸಮುದಾಯವು, ‘ಭಾರತ–ಮ್ಯಾನ್ಮಾರ್ ಗಡಿಯಾದ್ಯಂತ ತಡೆ ಬೇಲಿ ನಿರ್ಮಿಸಬೇಕು’ ಎಂದು ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.