ADVERTISEMENT

India, EU Deal: ಯುರೋಪ್‌ನ ಕಾರು, ವೈದ್ಯಕೀಯ ಸಾಮಗ್ರಿ, ವಿಮಾನಗಳ ತೆರಿಗೆ ಕಡಿತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2026, 8:58 IST
Last Updated 27 ಜನವರಿ 2026, 8:58 IST
   

ನವದೆಹಲಿ: ಭಾರತ ಮತ್ತು ಯುರೋಪಿಯನ್ ಒಕ್ಕೂಟವು ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಪ್ರಮುಖವಾಗಿ ಯುರೋಪಿಯನ್ ರಫ್ತು ವಲಯಗಳಲ್ಲಿ ಸುಂಕ ಕಡಿತವು ವ್ಯಾಪಕವಾಗಿರುತ್ತದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಮುಂದಿನ ದಶಕದಲ್ಲಿ ಭಾರತದ ಆಮದು ಮಾರುಕಟ್ಟೆಯ ಕೆಲವು ಅಂಶಗಳನ್ನು ಈ ಬದಲಾವಣೆಗಳು ಮರುರೂಪಿಸಲಿವೆ ಎಂದು ವರದಿ ತಿಳಿಸಿದೆ.

ೀ ಒಪ್ಪಂದದ ಪ್ರಕಾರ, ಭಾರತವು ಯುರೋಪಿಯನ್ ಕಾರುಗಳ ಮೇಲಿನ ಸುಂಕವನ್ನು ಕ್ರಮೇಣ ಶೇ 10ಕ್ಕೆ ಇಳಿಸುತ್ತದೆ. ಸದ್ಯು ಯುರೋಪಿಯನ್ ಕಾರುಗಳ ಮೇಲೆ ಸುಮಾರು ಶೇ 70ರವರೆಗೆ ಸುಂಕ ವಿಧಿಸಲಾಗುತ್ತಿದೆ. ಇದರಿಂದ ಕಾರುಗಳ ಸುಂಕ ಹೊರೆಯಿಂದ ಭಾರಿ ಕುಸಿತವಾಗಲಿದೆ. ಆದರೆ, ಈ ಕಡಿತವು ವರ್ಷಕ್ಕೆ 2,50,000 ವಾಹನಗಳಿಗೆ ಅನ್ವಯಿಸುತ್ತದೆ. ಇದು ಭಾರತದ ಪ್ರೀಮಿಯಂ ಕಾರು ಮಾರುಕಟ್ಟೆಯನ್ನು ಮರುರೂಪಿಸಬಹುದು ಎಂದು ಐರೋಪ್ಯ ಒಕ್ಕೂಟ ಹೇಳಿದೆ.

ಒಪ್ಪಂದವು ಹೆಚ್ಚು ವಿಸ್ತಾರವಾಗಿದ್ದು, ಭಾರತಕ್ಕೆ ಪ್ರವೇಶಿಸುವ ಶೇ 90ಕ್ಕಿಂತ ಹೆಚ್ಚು ಐರೋಪ್ಯ ಒಕ್ಕೂಟದ ಸರಕುಗಳ ಮೇಲಿನ ಸುಂಕಗಳನ್ನು ತೆಗೆದುಹಾಕಲಾಗುತ್ತದೆ ಅಥವಾ ಕಡಿಮೆ ಮಾಡಲಾಗುತ್ತದೆ. 2032ರ ವೇಳೆಗೆ ಭಾರತಕ್ಕೆ ಐರೋಪ್ಯ ಒಕ್ಕೂಟದ ಸರಕುಗಳ ರಫ್ತನ್ನು ದ್ವಿಗುಣಗೊಳಿಸುವ ಮತ್ತು ಸುಂಕದಲ್ಲಿ ವರ್ಷಕ್ಕೆ 4 ಬಿಲಿಯನ್ ಯುರೋಗಳಷ್ಟು ತೆರಿಗೆ ಇಳಿಸುವುದನ್ನು ನಿರೀಕ್ಷಿಸಲಾಗಿದೆ.

ADVERTISEMENT

ಪ್ರಸ್ತುತ ಯುರೋಪಿಯನ್ ಯಂತ್ರೋಪಕರಣಗಳ ಮೇಲೆ ಶೇ 40, ರಾಸಾಯನಿಕಗಳ ಮೇಲೆ ಶೇ 22 ಮತ್ತು ಔಷಧಗಳ ಮೇಲೆ ಶೇ 11 ರಷ್ಟು ಸುಂಕ ವಿಧಿಸಲಾಗುತ್ತಿದ್ದು, ಒಪ್ಪಂದ ಜಾರಿಗೆ ಬಂದ ಬಳಿಕ ಇದರಲ್ಲಿ ಬಹುತೇಕ ತೆರಿಗೆ ಕಡಿತಗೊಳ್ಳಲಿದೆ ಎಂದು ವರದಿ ತಿಳಿಸಿದೆ.

ವಿಮಾನ ಮತ್ತು ಬಾಹ್ಯಾಕಾಶ ನೌಕೆಗಳು ಸಂಪೂರ್ಣ ಸುಂಕಮುಕ್ತದತ್ತ ಸಾಗಲಿವೆ. ಬಹುತೇಕ ಎಲ್ಲ ರಾಸಾಯನಿಕಗಳ ಮೇಲೆ ತೆರಿಗೆ ವಿನಾಯಿತಿ, ಆಪ್ಟಿಕಲ್, ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳು ಸೇರಿ ಶೇ 90ರಷ್ಟು ಉತ್ಪನ್ನಗಳಿಗೆ ಸುಂಕವನ್ನು ತೆಗೆದುಹಾಕಲಾಗುವುದು. ಇದು ಭಾರತದಲ್ಲಿ ಆಸ್ಪತ್ರೆಗಳು ಮತ್ತು ರೋಗನಿರ್ಣಯದ ವೆಚ್ಚವನ್ನು ಕಡಿಮೆ ಮಾಡಬಹುದು.

ಆಹಾರ ಮತ್ತು ಪಾನೀಯಗಳ ಮೇಲಿನ ತೆರಿಗೆಯಲ್ಲೂ ಗಮನಾರ್ಹ ಬದಲಾವಣೆ ನಿರೀಕ್ಷಿಸಬಹುದಾಗಿದೆ. ಭಾರತವು ಯುರೋಪಿಯನ್ ವೈನ್ ಮೇಲಿನ ಸುಂಕದಲ್ಲಿ ಶೇ 20–30, ಸ್ಪಿರಿಟ್‌ಗಳ ಮೇಲಿನ ಸುಂಕದಲ್ಲಿ ಶೇ 40 ಮತ್ತು ಬಿಯರ್ ಮೇಲಿನ ಸುಂಕದಲ್ಲಿ ಶೇ 50 ರಷ್ಟು ಇಳಿಸುತ್ತದೆ.

ಯುರೋಪ್ ಒಕ್ಕೂಟದಿಂದ ಆಮದಾಗುವ ಆಲಿವ್ ಆಯಿಲ್, ಮಾರ್ಗರೀನ್ ಮತ್ತು ಸಸ್ಯಜನ್ಯ ಎಣ್ಣೆಗಳ ಮೇಲಿನ ಸುಂಕಗಳನ್ನು ಕಡಿತಗೊಳಿಸಲಾಗುತ್ತದೆ ಅಥವಾ ತೆಗೆದುಹಾಕಬಹುದು ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.