ADVERTISEMENT

‘ಕೊವ್ಯಾಕ್ಸಿನ್ ಲಸಿಕೆ ಪ್ರಯೋಗ ಶುರು: ದೆಹಲಿಯ ವ್ಯಕ್ತಿಗೆ ಕೊವ್ಯಾಕ್ಸಿನ್‌

ಕಾಣಿಸಿಲ್ಲ ಅಡ್ಡ ಪರಿಣಾಮ

ಪಿಟಿಐ
Published 24 ಜುಲೈ 2020, 19:29 IST
Last Updated 24 ಜುಲೈ 2020, 19:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೊರೊನಾ ವೈರಾಣು ತಡೆಗೆ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ‘ಕೊವ್ಯಾಕ್ಸಿನ್’‌ ಲಸಿಕೆಯು ಅತ್ಯಂತ ಮಹತ್ವದ ಘಟ್ಟ ಪ್ರವೇಶಿಸಿದೆ. ಈ ಲಸಿಕೆಯ ಮನುಷ್ಯನ ಮೇಲಿನ ಮೊದಲ ಹಂತದ ಪ್ರಯೋಗ ಶುಕ್ರವಾರ ಆರಂಭವಾಗಿದೆ. ಮೂವತ್ತರ ಹರೆಯದ ವ್ಯಕ್ತಿಯೊಬ್ಬರಿಗೆ ದೆಹಲಿಯ ಏಮ್ಸ್‌ನಲ್ಲಿ ಮೊದಲ ಡೋಸ್‌ ನೀಡಲಾಗಿದೆ.

ಲಸಿಕೆ ಪ್ರಯೋಗಕ್ಕಾಗಿ 3,500ಕ್ಕೂ ಹೆಚ್ಚು ಸ್ವಯಂಸೇವಕರು ಏಮ್ಸ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 22 ಮಂದಿಯ ತಪಾಸಣೆ ನಡೆಯುತ್ತಿದೆ ಎಂದು ಏಮ್ಸ್‌ನ ಪ್ರಾಧ್ಯಾಪಕ‌ ಸಂಜಯ್‌ ರಾಯ್‌ ಹೇಳಿದ್ದಾರೆ. ರಾಯ್‌ ಅವರು ಏಮ್ಸ್‌ನಲ್ಲಿ ನಡೆಯುವ ಕೊವ್ಯಾಕ್ಸಿನ್‌ ಅಧ್ಯಯನದ ಮುಖ್ಯಸ್ಥರು.

ಮೊದಲ ಡೋಸ್‌ ಪಡೆದಿರುವ ವ್ಯಕ್ತಿಯನ್ನು ಎರಡು ದಿನಗಳ ಹಿಂದೆ ತಪಾಸಣೆಗೆ ಒಳಪಡಿಸಲಾಗಿತ್ತು. ಆರೋಗ್ಯಕ್ಕೆ ಸಂಬಂಧಿಸಿ ಅವರ ದೇಹದ ಎಲ್ಲ ಅಂಶಗಳು ಸಹಜವಾಗಿವೆ. ಅವರಿಗೆ ಬೇರೆ ಯಾವ ಅನಾರೋಗ್ಯ ಸಮಸ್ಯೆಯೂ ಇಲ್ಲ. 0.5 ಎಂ.ಎಲ್‌ನ ಮೊದಲ ಡೋಸ್‌ ಅನ್ನು ಇಂಜೆಕ್ಷನ್‌ ಮೂಲಕ ನೀಡಲಾಗಿದೆ. ಅವರಲ್ಲಿ ಯಾವುದೇ ಅಡ್ಡ ಪರಿಣಾಮ ಕಾಣಿಸಿಲ್ಲ. ಮುಂದಿನ ಏಳು ದಿನ ಅವರ ಮೇಲೆ ನಿಗಾ ಇರಿಸಲಾಗುವುದು ಎಂದು ರಾಯ್‌ ತಿಳಿಸಿದ್ದಾರೆ.

ADVERTISEMENT

ಇನ್ನೂ ಕೆಲವರಿಗೆ ಶನಿವಾರ ಮೊದಲ ಡೋಸ್‌ ನೀಡಲಾಗುವುದು.

ಕೊವ್ಯಾಕ್ಸಿನ್‌ ಮನುಷ್ಯನ ಮೇಲೆ ಪ್ರಯೋಗದ 1 ಮತ್ತು 2ನೇ ಹಂತವನ್ನು ನಡೆಸಲು ದೇಶದ 12 ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಬೆಳಗಾವಿಯ ಜೀವನ್‌ರೇಖಾ ಆಸ್ಪತ್ರೆಯೂ ಸೇರಿದೆ.

ಮೊದಲ ಹಂತದಲ್ಲಿ 375 ಸ್ವಯಂ ಸೇವಕರಿಗೆ ಲಸಿಕೆ ನೀಡಲಾಗುವುದು. ಏಮ್ಸ್‌ನಲ್ಲಿ ಗರಿಷ್ಠ ಎಂದರೆ ನೂರು ಮಂದಿ ಲಸಿಕೆ ಪಡೆದುಕೊಳ್ಳಲಿದ್ದಾರೆ. ಎರಡನೇ ಹಂತದಲ್ಲಿ 750 ಸ್ವಯಂ ಸೇವಕರು ಭಾಗಿಯಾಗಲಿದ್ದಾರೆ.

ಮೊದಲ ಹಂತದ ಪ್ರಯೋಗಕ್ಕೆ 18–55ರ ವಯೋಮಾನದ ಆರೋಗ್ಯವಂತ ವ್ಯಕ್ತಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಗರ್ಭಿಣಿಯರಲ್ಲದ ಮಹಿಳೆಯರಿಗಷ್ಟೇ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುವುದು.

ಎರಡನೇ ಹಂತದಲ್ಲಿ 12–65 ವರ್ಷದವರನ್ನು ಪ್ರಯೋಗಕ್ಕೆ ಬಳಸಿಕೊಳ್ಳಲಾಗುವುದು.

ಪ್ರತಿ ಸ್ವಯಂಸೇವಕರಿಗೆ ಎರಡು ವಾರಗಳ ಅಂತರದಲ್ಲಿ ಎರಡು ಡೋಸ್‌ ನೀಡಲಾಗುವುದು. ಮೊದಲ 50 ಮಂದಿಗೆ ಕಡಿಮೆ ಸಾಮರ್ಥ್ಯದ ಡೋಸ್‌ ನೀಡಲಾಗುವುದು. ಇದು ಸುರಕ್ಷಿತ ಎಂಬುದು ದೃಢಪಟ್ಟ ಬಳಿಕ ಮತ್ತೆ 50 ಮಂದಿಗೆ ಹೆಚ್ಚಿನ ಡೋಸ್‌ ನೀಡಲಾಗುವುದು ಎಂದು ರಾಯ್‌ ಹೇಳಿದ್ದಾರೆ.

ಹೈದರಾಬಾದ್‌ನ ಭಾರತ್‌ ಬಯೊಟೆಕ್‌ ಸಂಸ್ಥೆಯು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ (ಐಸಿಎಂಆರ್‌) ಸಹಯೋಗದಲ್ಲಿ ಈಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.