ADVERTISEMENT

ಹೊಸ ತಲೆಮಾರಿನ ಆಕಾಶ್ ಕ್ಷಿಪಣಿ ಯಶಸ್ವಿ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 15:05 IST
Last Updated 23 ಜುಲೈ 2021, 15:05 IST
ಒಡಿಶಾದ ಕರಾವಳಿಯ ಚಾಂಡಿಪುರ ಸಮಗ್ರ ಪರೀಕ್ಷಾ ಕೇಂದ್ರದಿಂದ ಹೊಸ ಪೀಳಿಗೆಯ ಆಕಾಶ್ (ಆಕಾಶ್-ಎನ್‌ಜಿ) ಕ್ಷಿಪಣಿಯ ಯಶಸ್ವಿ ಹಾರಾಟವನ್ನು ಶುಕ್ರವಾರ ಡಿಆರ್‌ಡಿಒ ನಡೆಸಿತು (ಪಿಟಿಐ ಚಿತ್ರ)
ಒಡಿಶಾದ ಕರಾವಳಿಯ ಚಾಂಡಿಪುರ ಸಮಗ್ರ ಪರೀಕ್ಷಾ ಕೇಂದ್ರದಿಂದ ಹೊಸ ಪೀಳಿಗೆಯ ಆಕಾಶ್ (ಆಕಾಶ್-ಎನ್‌ಜಿ) ಕ್ಷಿಪಣಿಯ ಯಶಸ್ವಿ ಹಾರಾಟವನ್ನು ಶುಕ್ರವಾರ ಡಿಆರ್‌ಡಿಒ ನಡೆಸಿತು (ಪಿಟಿಐ ಚಿತ್ರ)   

ಬಾಲಸೋರ್‌ (ಒಡಿಶಾ): ಹೊಸ ತಲೆಮಾರಿನ ಆಕಾಶ್ (ಆಕಾಶ್-ಎನ್‌ಜಿ) ಕ್ಷಿಪಣಿಯನ್ನು ಶುಕ್ರವಾರ ಇಲ್ಲಿನ ಕರಾವಳಿಯ ಚಾಂಡಿಪುರದ ಸಮಗ್ರ ಪರೀಕ್ಷಾ ಕೇಂದ್ರದಲ್ಲಿ (ಐಟಿಆರ್‌) ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ ಎಂದು ಡಿಆರ್‌ಡಿಒ ಮೂಲಗಳು ತಿಳಿಸಿವೆ.

‘ಕ್ಷಿಪಣಿಯು ರೇಡಿಯೊ ಫ್ರೀಕ್ವೆನ್ಸಿ ಅನ್ವೇಷಕ ವ್ಯವಸ್ಥೆ ಹೊಂದಿದ್ದು, ಅತಿ ವೇಗದ ಮಾನವರಹಿತ ವೈಮಾನಿಕ ಗುರಿಯನ್ನು ಯಶಸ್ವಿಯಾಗಿ ತಡೆದಿದೆ’ ಎಂದು ಡಿಆರ್‌ಡಿಒ ವಕ್ತಾರರು ತಿಳಿಸಿದ್ದಾರೆ.

ಪರೀಕ್ಷಾ ಸಮಯದಲ್ಲಿ, ಕ್ಷಿಪಣಿಯು ವೇಗದ ಮತ್ತು ಚುರುಕುಬುದ್ಧಿಯ ವೈಮಾನಿಕ ಬೆದರಿಕೆಗಳನ್ನು ತಟಸ್ಥಗೊಳಿಸಲು ಅಗತ್ಯವಾದ ಹೆಚ್ಚಿನ ಕುಶಲತೆ ಪ್ರದರ್ಶಿಸಿತು ಎಂದು ಮೂಲಗಳು ತಿಳಿಸಿವೆ.

ADVERTISEMENT

ಆಕಾಶ್-ಎನ್‌ಜಿ ಕ್ಷಿಪಣಿಯು ಭಾರತೀಯ ವಾಯುಪಡೆಯ ವಾಯು ರಕ್ಷಣಾ ಸಾಮರ್ಥ್ಯ ದ್ವಿಗುಣವಾಗುವುದನ್ನು ಸಾಬೀತುಪಡಿಸಿದೆ.

ಚಾಂಡಿಪುರ ಸಮೀಪದ ಐಟಿಆರ್‌ ಪರೀಕ್ಷಾ ನೆಲೆಯಲ್ಲಿ ಎರಡು ದಿನಗಳ ಹಿಂದೆ ಭೂಮಿಯಿಂದ ಆಕಾಶಕ್ಕೆ ಹಾರುವ (ಸರ್ಫೇಸ್‌ ಟು ಏರ್‌) ಆಕಾಶ್‌ ಕ್ಷಿಪಣಿಯ ಯಶಸ್ವಿ ಉಡಾವಣೆ ನಡೆಸಲಾಗಿತ್ತು ಎಂದು ಮೂಲಗಳು ಹೇಳಿವೆ.

ಕ್ಷಿಪಣಿಯನ್ನು ಹೈದರಾಬಾದ್‌ನ ರಕ್ಷಣಾ ಸಂಶೋಧನೆ ಅಭಿವೃದ್ಧಿ ಪ್ರಯೋಗಾಲಯ (ಡಿಆರ್‌ಡಿಎಲ್) ಇತರ ಡಿಆರ್‌ಡಿಒ ಪ್ರಯೋಗಾಲಯಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.