ADVERTISEMENT

ಈಶಾನ್ಯ ರಾಜ್ಯಗಳಿಗೆ ಮ್ಯಾನ್ಮಾರ್‌ ಹೋರಾಟಗಾರರು

ಮಿಲಿಟರಿ ಆಡಳಿತ ವಿರುದ್ಧ ಹೋರಾಟ: ಸಾವಿರಾರು ಮಂದಿ ಭಾರತ ಪ್ರವೇಶ: ಮೂಡಿದ ಆತಂಕ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 14:32 IST
Last Updated 10 ಜೂನ್ 2021, 14:32 IST
ಭಾರತ–ಮ್ಯಾನ್ಮಾರ್‌ ಗಡಿಯಲ್ಲಿರುವ ಟಿಯು ನದಿ ದಾಟುತ್ತಿರುವ ಜನರು   ಸಂಗ್ರಹ ಚಿತ್ರ    ಪಿಟಿಐ
ಭಾರತ–ಮ್ಯಾನ್ಮಾರ್‌ ಗಡಿಯಲ್ಲಿರುವ ಟಿಯು ನದಿ ದಾಟುತ್ತಿರುವ ಜನರು   ಸಂಗ್ರಹ ಚಿತ್ರ    ಪಿಟಿಐ   

ನವದೆಹಲಿ: ಮ್ಯಾನ್ಮಾರ್‌ನ ಸಾವಿರಾರು ಮಂದಿ ಭಾರತದ ಈಶಾನ್ಯ ರಾಜ್ಯಗಳಲ್ಲಿ ಆಶ್ರಯ ಪಡೆದಿದ್ದು, ಹೊಸ ಸಮಸ್ಯೆಗಳನ್ನು ಸೃಷ್ಟಿಸುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಈ ರಾಜ್ಯಗಳು, ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪಿಸುವಂತೆ ನಡೆಸುವ ಹೋರಾಟದ ಚಟುವಟಿಕೆಗಳ ತಾಣವಾಗಬಹುದು. ಇದರಿಂದ, ಅಸ್ಥಿರತೆ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಿಜೋರಾಂ, ಮಣಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ಮ್ಯಾನ್ಮಾರ್‌ನ ಸುಮಾರು 16 ಸಾವಿರ ಮಂದಿ ಆಶ್ರಯ ಪಡೆದಿದ್ದಾರೆ.ಮಿಜೋರಾಂ ರಾಜ್ಯಕ್ಕೆ ಅತಿ ಹೆಚ್ಚು ಜನರು ಪ್ರವೇಶಿಸಿದ್ದಾರೆ ಎಂದು ವಿವಿಧ ಸಂಘಟನೆಗಳು ಮತ್ತು ಸರ್ಕಾರಿ ಅಧಿಕಾರಿಗಳು ಅಂದಾಜಿಸಿದ್ದಾರೆ.

ADVERTISEMENT

ಮಿಲಿಟರಿ ಆಡಳಿತದ ದೌರ್ಜನ್ಯದಿಂದ ತಪ್ಪಿಸಿಕೊಂಡು ಮ್ಯಾನ್ಮಾರ್‌ನಿಂದ ಇವರೆಲ್ಲರೂ ಬಂದಿದ್ದಾರೆ. ಹಲವರು ಬೇಲಿ ಇಲ್ಲದ ದಟ್ಟವಾದ ಅರಣ್ಯದ ಮೂಲಕ ಇವರು ಭಾರತ ಪ್ರವೇಶಿಸಿದ್ದಾರೆ

‘ಪ್ರಸ್ತುತ ಪರಿಸ್ಥಿತಿ ಬಗ್ಗೆ ನಿರಂತರವಾಗಿ ನಿಗಾವಹಿಸಲಾಗಿದೆ. ಹಲವರು ಸ್ಥಳೀಯರ ಸಹಾಯದಿಂದಲೇ ಭಾರತ ಪ್ರವೇಶಿಸಿದ್ದಾರೆ. ಅವರಲ್ಲಿ ಕೆಲವರು ವಾಪಸ್‌ ತೆರಳಿದ್ದಾರೆ. ಇಲ್ಲಿ ಯಾವುದೇ ರೀತಿ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮೇ ತಿಂಗಳಲ್ಲಿ ಮಿಜೋರಾಂನ ಚಂಫಿ ಜಿಲ್ಲೆಯಲ್ಲಿ ಕನಿಷ್ಠ 50 ಮಂದಿ ತರಬೇತಿ ಶಿಬಿರ ನಡೆಸಿದ್ದರು. ತರಬೇತಿಯಲ್ಲಿ ಯಾವುದೇ ಶಸ್ತ್ರಾಸ್ತ್ರಗಳನ್ನು ಬಳಸಿರಲಿಲ್ಲ. ಭಾರತದ ಅರೆಸೇನಾ ಪಡೆಗಳು ವಿಚಾರಣೆ ನಡೆಸಿದ ಬಳಿಕ ಶಿಬಿರವನ್ನು ಮುಕ್ತಾಯಗೊಳಿಸಲಾಯಿತು’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮ್ಯಾನ್ಮಾರ್‌ನಲ್ಲಿನ ಪ್ರಜಾಪ್ರಭುತ್ವದ ಪರ ಕೆಲವು ಹೋರಾಟಗಾರರು ಭಾರತ ಹಾಗೂ ಮ್ಯಾನ್ಮಾರ್‌ನ ರಖಿನೆ ಪ್ರದೇಶದಲ್ಲಿರುವ ಉಗ್ರಗಾಮಿ ಸಂಘಟನೆಯಾದ ಅರಕನ್‌ ಸೇನೆಯಿಂದಲೂ ಶಸ್ತ್ರಾಸ್ತ್ರ ಸಂಗ್ರಹಿಸಿದ್ದಾರೆ ಎಂದು ಪದಚ್ಯುತ ನಾಯಕಿ ಆಂಗ್‌ ಸಾನ್‌ ಸೂ ಕಿ ಆಡಳಿತದಲ್ಲಿದ್ದ ಪ್ರಮುಖ ನಾಯಕರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.