ADVERTISEMENT

ದೆಹಲಿ: ಇಂಡಿಯಾ ಗೇಟ್‌ ಶಂಕುಸ್ಥಾಪನೆಗೆ 100 ವರ್ಷ

ಪಿಟಿಐ
Published 11 ಫೆಬ್ರುವರಿ 2021, 8:20 IST
Last Updated 11 ಫೆಬ್ರುವರಿ 2021, 8:20 IST
ಇಂಡಿಯಾ ಗೇಟ್‌
ಇಂಡಿಯಾ ಗೇಟ್‌   

ನವದೆಹಲಿ: ಇಲ್ಲಿ ನಿರ್ಮಿಸಿರುವ ಇಂಡಿಯಾ ಗೇಟ್‌ಗೆ ಶಂಕುಸ್ಥಾಪನೆ ನೆರವೇರಿಸಿ ಇದೀಗ ನೂರು ವರ್ಷಗಳಾಗಿವೆ.

ಅಖಿಲ ಭಾರತ ಯುದ್ಧ ಸ್ಮಾರಕ ಕಮಾನು ಅಥವಾ ಇಂಡಿಯಾ ಗೇಟ್‌ ಎಂದೇ ಕರೆಯಲಾಗುವ ಈ ಸ್ಮಾರಕಕ್ಕೆ ಭಾರತಕ್ಕೆ ಭೇಟಿ ನೀಡಿದ್ದ ಬ್ರಿಟಿಷ್‌ ‘ರಾಯಲ್‌ ಡ್ಯೂಕ್‌ ಆಫ್‌ ಕನೌಟ್‌’ ಪ್ರಿನ್ಸ್‌ ಅರ್ಥರ್‌ ಅವರು 1921ರ ಫೆಬ್ರುವರಿ 10ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.

ಪ್ರಿನ್ಸ್‌ ಅರ್ಥರ್‌, ಐದನೇ ಜಾರ್ಜ್‌ ಅವರ ಚಿಕ್ಕಪ್ಪ. ದೆಹಲಿಯಲ್ಲಿ 1911ರಲ್ಲಿ ಅದ್ಧೂರಿ ದರ್ಬಾರ್‌ ನಡೆಸಿದ್ದ ಅವರು ಕಲ್ಕತ್ತದಿಂದ ದೆಹಲಿಗೆ ರಾಜಧಾನಿಯನ್ನು ಸ್ಥಳಾಂತರಿಸುವ ನಿರ್ಧಾರ ಪ್ರಕಟಿಸಿದ್ದರು. ಈ ನಿರ್ಧಾರದಿಂದಾಗಿ, ರೈಸಿನಾ ಹಿಲ್‌ ಪ್ರದೇಶದಲ್ಲಿ 1911ರಂದು ಡಿಸೆಂಬರ್‌ 15ರಂದು ಹೊಸ ರಾಜಧಾನಿ ನಿರ್ಮಾಣಕ್ಕೆ ಸಂಬಂಧಿಸಿದ ಕಟ್ಟಡಗಳಿಗೆ ಜಾರ್ಜ್‌ ಶಂಕುಸ್ಥಾಪನೆ ನೆರವೇರಿಸಿದ್ದರು.

ADVERTISEMENT

ಸರ್‌ ಎಡ್ವಿನ್‌ ಲ್ಯಾಂಡ್‌ಸೀರ್‌ ಲುಟ್ಯೆನ್ಸ್‌ ಮತ್ತು ಸರ್‌ ಹೆರ್ಬರ್ಟ್‌ ಬೇಕರ್‌ ಹೊಸ ರಾಜಧಾನಿಯ ರೂಪುರೇಷೆಗಳನ್ನು ಸಿದ್ಧಪಡಿಸಿದರು. ಹೊಸ ರಾಜಧಾನಿಗಾಗಿ ನಗರವನ್ನು ನಿರ್ಮಿಸುವ ಸಂದರ್ಭದಲ್ಲಿ ಮೊದಲನೇ ಜಾಗತಿಕ ಯುದ್ಧ ಆರಂಭವಾಯಿತು. ಈ ಯುದ್ಧಕ್ಕೆ ಅಪಾರ ಸಂಖ್ಯೆಯಲ್ಲಿ ಬ್ರಿಟಿಷ್‌ ಭಾರತೀಯ ಸೇನೆಯಿಂದ ಯೋಧರನ್ನು ಕಳುಹಿಸಲಾಯಿತು.

42 ಮೀಟರ್‌ ಎತ್ತರದ ಈ ಸ್ಮಾರಕವನ್ನು ಮೊದಲ ಜಾಗತಿಕ ಯುದ್ಧ (1914–1918) ಮತ್ತು ಮೂರನೇ ಆಂಗ್ಲೋ–ಅಫ್ಗನ್‌ (1919) ಯುದ್ಧದಲ್ಲಿ ಹುತಾತ್ಮರಾದವರಿಗಾಗಿ ಗೌರವ ಸಲ್ಲಿಸಲು ಇಂಡಿಯಾ ಗೇಟ್‌ ನಿರ್ಮಿಸಲಾಯಿತು. ಮೊದಲು ಈ ಐತಿಹಾಸಿಕ ಸ್ಮಾರಕವನ್ನು ಅಖಿಲ ಭಾರತ ಯುದ್ಧ ಸ್ಮಾರಕ ಕಮಾನು ಎಂದೇ ಕರೆಯಲಾಗುತ್ತಿತ್ತು.

ಸುಮಾರು 80 ಸಾವಿರ ಭಾರತದ ಯೋಧರು ಈ ಯುದ್ಧಗಳಲ್ಲಿ ಹುತಾತ್ಮರಾಗಿದ್ದಾರೆ. ಇಂಡಿಯಾ ಗೇಟ್‌ ಮೇಲೆ 13,516 ಮಂದಿಯ ಹೆಸರನ್ನು ಬರೆಯಲಾಗಿದೆ.

‘ದೇಶದ ರಾಜಧಾನಿಯ ಸೆಂಟ್ರಲ್‌ ವಿಸ್ತಾದ ಈ ಸ್ಥಳದಲ್ಲಿ ಒಂದು ಅದ್ಭುತ ಸ್ಮಾರಕ ನಿರ್ಮಾಣವಾಗಲಿದೆ. ಮುಂದಿನ ಪೀಳಿಗೆಗೆ ಭಾರತೀಯ ಸೇನೆಯ ಅಧಿಕಾರಿಗಳು ಮತ್ತು ಯೋಧರ ತ್ಯಾಗವನ್ನು ಸ್ಮರಿಸುವ ಸ್ಮಾರಕ ಇದಾಗಲಿದೆ’ ಎಂದು ಡ್ಯೂಕ್‌ ಆಫ್‌ ಕನೌಟ್‌ ಅಂದು ತಮ್ಮ ಭಾಷಣದಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.