ADVERTISEMENT

ಭಾರತೀಯರು ತೆರಿಗೆ ಭಯೋತ್ಪಾದನೆಯಿಂದ ಪಾರದರ್ಶಕ ತೆರಿಗೆಗೆ ಬದಲಾಗಿದ್ದಾರೆ: ಮೋದಿ

ಪಿಟಿಐ
Published 11 ನವೆಂಬರ್ 2020, 17:21 IST
Last Updated 11 ನವೆಂಬರ್ 2020, 17:21 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಕಳೆದ 6 ವರ್ಷಗಳ ತೆರಿಗೆ ನೀತಿಗಳಿಂದಾಗಿ ಭಾರತೀಯರು ತೆರಿಗೆ ಭಯೋತ್ಪಾದನೆಯಿಂದ ಪಾರದರ್ಶಕ ತೆರಿಗೆಯತ್ತ ಹೊರಳಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ನಮ್ಮ ಸರ್ಕಾರವು ತೆರಿಗೆ ಸಂಗ್ರಹ ಮಾಡು ವವರು ಹಾಗೂ ತೆರಿಗೆ ಪಾವತಿಸುವವರ ನಡುವಿನ ವಿಶ್ವಾಸದ ಕೊರತೆಯನ್ನು ನಿವಾರಿಸಲು ಯತ್ನಿಸಿದೆ’ ಎಂದರು.

ಕಾರ್ಪೊರೇಟ್ ತೆರಿಗೆಯನ್ನು ಶೇಕಡ 22ಕ್ಕೆ ಇಳಿಸಿದ್ದು, ಲಾಭಾಂಶ ವಿತರಣಾ ತೆರಿಗೆಯನ್ನು ಇಲ್ಲವಾಗಿಸಿದ್ದು, ತೆರಿಗೆ ಮೊತ್ತವನ್ನು ತ್ವರಿತವಾಗಿ ಹಿಂದಿರುಗಿಸುತ್ತಿರುವುದು ಪಾರದರ್ಶಕತೆಯನ್ನು ತಂದಿವೆ, ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಿವೆ ಎಂದರು.

ADVERTISEMENT

‘ತೆರಿಗೆ ಭಯೋತ್ಪಾದನೆಯ ಸ್ಥಿತಿಯಿಂದ ಪಾರದರ್ಶಕ ತೆರಿಗೆ ಸ್ಥಿತಿಯತ್ತ ಸಾಗಲು ಸಾಧ್ಯವಾಗಿದ್ದಕ್ಕೆ ಕಾರಣ ಸರ್ಕಾರ ಅನುಸರಿಸುತ್ತಿರುವ ಸುಧಾರಣೆ, ಸಾಧನೆ ಮತ್ತು ಪರಿವರ್ತನೆ ಎಂಬ ಮಾರ್ಗ’ ಎಂದು ಅವರು ಹೇಳಿದರು.

‘₹ 5 ಲಕ್ಷದವರೆಗಿನ ವಾರ್ಷಿಕ ಆದಾಯವು ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿದೆ. ಇದರ ಪ್ರಯೋಜನವು ಕೆಳ ಮಧ್ಯಮ ವರ್ಗದ ಯುವಕರಿಗೆ ಸಿಗುತ್ತಿದೆ. ಈ ವರ್ಷದ ಬಜೆಟ್‌ನಲ್ಲಿ ಹೊಸ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು ಅದು ಸರಳವಾಗಿದೆ’ ಎಂದರು.

ಆದಾಯ ತೆರಿಗೆ ಪಾವತಿ ಮಾಡುವವರ ವಿಚಾರದಲ್ಲಿ ಇರುವ ವಿಶ್ವಾಸವು ಹೆಚ್ಚಾಗಿದೆ. ಶೇಕಡ 99.75ರಷ್ಟು ಆದಾಯ ತೆರಿಗೆ ವಿವರಗಳನ್ನು ಜಗ್ಗಾಟ ಇಲ್ಲದೆಯೇ ಒಪ್ಪಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.