ADVERTISEMENT

ಭಾರತದಲ್ಲಿ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ: ರಾಷ್ಟ್ರಪತಿ ಕೋವಿಂದ್

ಆರೋಗ್ಯ ಭಾರತಿಯ ‘ಆರೋಗ್ಯ ಮಂಥನ’ ಸಮಾವೇಶದಲ್ಲಿ ಪ್ರತಿಪಾದನೆ

ಪಿಟಿಐ
Published 28 ಮೇ 2022, 13:18 IST
Last Updated 28 ಮೇ 2022, 13:18 IST
ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಮಂಥನ ಸಮಾವೇಶವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾತನಾಡಿದರು. –ಪಿಟಿಐ ಚಿತ್ರ
ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಮಂಥನ ಸಮಾವೇಶವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾತನಾಡಿದರು. –ಪಿಟಿಐ ಚಿತ್ರ   

ಭೋಪಾಲ್: ವಿಶ್ವದಲ್ಲೇ ಭಾರತವು ಎಲ್ಲರಿಗೂ ಕೈಗೆಟುಕುವಂತೆ ಉತ್ತಮ ಆರೋಗ್ಯ ಸೌಕರ್ಯವನ್ನು ನೀಡುತ್ತಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಉತ್ತಮ ಆರೋಗ್ಯ ಚಿಕಿತ್ಸೆಯ ಸೇವೆ ಪಡೆಯಲು ವಿಶ್ವದ ನಾನಾ ದೇಶಗಳ ನಾಗರಿಕರು ವಿಶೇಷವಾಗಿ ಭಾರತ ಸುತ್ತಮುತ್ತಲಿನ ಪ್ರಜೆಗಳು ಭಾರತಕ್ಕೆ ಬರುತ್ತಾರೆ. ಅಲ್ಲದೆ ಭಾರತವು ವೈದ್ಯಕೀಯ ಪ್ರವಾಸೋದ್ಯಮದಲ್ಲಿ ಅತಿವೇಗವಾಗಿ ಬೆಳೆಯುತ್ತಿದೆ ಎಂದು ಹೇಳಿದ್ದಾರೆ.

ಶನಿವಾರ ಇಲ್ಲಿ ಆರ್‌ಎಸ್ಎಸ್ ಬೆಂಬಲಿತ ಆರೋಗ್ಯ ಭಾರತಿ ಹಮ್ಮಿಕೊಂಡಿದ್ದ ‘ಒಂದು ದೇಶ, ಒಂದೇ ಆರೋಗ್ಯ ವ್ಯವಸ್ಥೆ’ ಕುರಿತು ‘ಆರೋಗ್ಯ ಮಂಥನ’ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದಲ್ಲಿ ಇಂದು ವಿಶ್ವದಲ್ಲೇ ಅತಿ ಕಡಿಮೆ ದರಕ್ಕೆ ಉತ್ತಮ ಆರೋಗ್ಯ ಸೌಕರ್ಯಗಳು ಸಿಗುತ್ತವೆ. ವಿಶೇಷವಾಗಿ ದೆಹಲಿಯಲ್ಲಿ ಸ್ಥಳೀಯರಿಗಿಂತಲೂ ವಿದೇಶದಿಂದ ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆ ಪಡೆಯುವುದನ್ನು ಕಾಣಬಹುದು ಎಂದು ಹೇಳಿದರು.

ADVERTISEMENT

ಕಳೆದ ಎರಡೂವರೆ ವರ್ಷಗಳ ಹಿಂದೆ ಇಡೀ ದೇಶವನ್ನು ಮಾರಕ ವ್ಯಾಧಿಯನ್ನು ತೀವ್ರವಾಗಿ ಬಾಧಿಸಿತ್ತು. ಆದರೆ, ಶೇ 1 ಅಥವಾ 2ರಷ್ಟು ಮಂದಿ ಮಾತ್ರವೇ ಈ ರೋಗದಿಂದ ಮುಕ್ತವಾಗಿದ್ದರು ಎಂದು ಕೊರೊನಾ ವೈರಸ್ ಬಗ್ಗೆ ಪ್ರಸ್ತಾಪಿಸಿದರು.ಈ ವೇಳೆ ಲಸಿಕೆಯನ್ನು ಶೋಧಿಸುವ ಮೂಲಕ ಲಕ್ಷಾಂತರ ಜನರನ್ನು ರಕ್ಷಿಸಿದ ವಿಜ್ಞಾನಿಗಳು ಮತ್ತು ವೈದ್ಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನೂರು ವರ್ಷಗಳ ಹಿಂದೆ ಸಾಂಕ್ರಾಮಿಕ ರೋಗಗಳಿಂದ ಕೋಟ್ಯಂತರ ಜನ ಮೃತಪಟ್ಟಿದ್ದರು. ಆದರೆ, ಈಗ ಲಸಿಕೆಗಳ ಅಭಿವೃದ್ಧಿಯಿಂದ ಈಗ ಪರಿಸ್ಥಿತಿ ಬದಲಾವಣೆಯಾಗಿದೆ. ಇತ್ತೀಚೆಗೆ ತಾವು ಜಮೈಕಾ ಮತ್ತು ಸೇಂಟ್ ವಿನ್ಸೆಂಟ್ ಭೇಟಿಯನ್ನು ನೆನಪಿಸಿಕೊಂಡ ಅವರು, ಕೋವಿಡ್ ಲಸಿಕೆಯನ್ನು ನೀಡಿದ್ದಕ್ಕೆ ಆ ದೇಶದ ನಾಯಕರು ಭಾರತವನ್ನು ಕೊಂಡಾಡಿದರು ಎಂದು ಹೇಳಿದರು. ಈ ಎರಡೂ ದೇಶಗಳಿಗೆ ಪ್ರಧಾನಿ ಮೋದಿ ಅವರು ತಲಾ 50 ಸಾವಿರ ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡಿದ್ದರು.

2017ರಲ್ಲಿ ಘೋಷಿಸಲಾದ ರಾಷ್ಟ್ರೀಯ ಆರೋಗ್ಯ ನೀತಿಯಡಿ ಪ್ರತಿಯೊಬ್ಬರಿಗೂ ಕೈಗೆಟುಕುವ ದರದಲ್ಲಿ ಉತ್ತಮ ಆರೋಗ್ಯ ಸೇವೆ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಕೇರಳದಲ್ಲಿ ಆರಂಭಿಸಲಾಗಿದ್ದ ಆರೋಗ್ಯ ಭಾರತಿಯ ತಂಡವು ಇದೀಗ ದೇಶದ ಶೇ 85 ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.