ಮುಂಬೈ: ‘ಭಾರತವು ವಿವಿಧತೆಯನ್ನು ಆಚರಿಸುವ ದೇಶವಾಗಿದೆ. ನಾವು ಯಾರನ್ನೂ ಹೊರಗಿಡುವುದಿಲ್ಲ. ನಮ್ಮ ರಾಷ್ಟ್ರಧ್ವಜದ ಚಕ್ರವು ವಾಸ್ತವದಲ್ಲಿ ಧರ್ಮ ಚಕ್ರವಾಗಿದೆ. ಇದು ಸಮಾಜದ ಎಲ್ಲವನ್ನು ಬೆಸೆಯುವ ಮೂಲಭೂತ ತತ್ವದ ಪ್ರತಿಬಿಂಬ’ ಎಂದು ಆರ್‌ಎಸ್‌ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್ ವೈದ್ಯ ಹೇಳಿದರು.
ಬುಧವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಭಾರತವನ್ನು ವೈವಿಧ್ಯಮಯ ಸಂಸ್ಕೃತಿಗಳ ದೇಶವೆಂದು ವರ್ಣಿಸಲಾಗಿದೆ. ಆದರೆ, ಅದು ತಪ್ಪು. ನಾವು ವಿಭಿನ್ನ ಸಂಸ್ಕೃತಿಗಳನ್ನು ಹೊಂದಿಲ್ಲ, ನಮ್ಮಲ್ಲಿ ಇರುವುದು ಏಕ ಸಂಸ್ಕೃತಿ. ಆದರೆ, ಇದರ ಆಚರಣೆಯಷ್ಟೇ ವಿವಿಧತೆಯಿಂದ ಕೂಡಿದೆ’ ಎಂದು ಹೇಳಿದರು.
‘ಸಮಾಜದಲ್ಲಿ ಅನೇಕ ವ್ಯವಸ್ಥೆಗಳು ಸಮಾಜದ ನಿಯಮಗಳಾನುಸಾರ ಕಾರ್ಯನಿರ್ವಹಿಸುತ್ತವೆ. ಹಾಗಾಗಿಯೇ ನಮ್ಮ ಸಮಾಜವು ಧರ್ಮಧಿಷ್ಟ (ಧರ್ಮದ ಮೇಲೆ ಸ್ಥಾಪಿತವಾದ) ಸಮಾಜವೆನಿಸಿದೆ. ಆದರೆ, ಈ ಧರ್ಮನಿರಪೇಕ್ಷ (ಜಾತ್ಯತೀತ) ಎಂಬ ಪದವು ಎಲ್ಲಿಂದ ಬಂದಿದೆಯೋ ತಿಳಿಯದು’ ಎಂದು ವೈದ್ಯ ಹೇಳಿದರು.
‘ಪ್ರತಿ ಆತ್ಮವೂ ದೈವಿಕವಾದುದು. ಇದು ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯಿಸುತ್ತದೆ. ಇದರಲ್ಲಿ ನಮ್ಮ ದೇಶ ಮಾತ್ರ ನಂಬಿಕೆ ಇರಿಸಿದೆ. ಬೇರೆ ಯಾವ ದೇಶವೂ ಈ ರೀತಿ ನಂಬಿಕೆ ಇರಿಸಿಲ್ಲ. ಅಮೆರಿಕದಂತಹ ದೇಶಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಅಲ್ಲಿ ಮಹಿಳೆಯರು ಮತದಾನದ ಹಕ್ಕು ಪಡೆಯಲು ಸಾಕಷ್ಟು ಹೋರಾಟ ನಡೆಸಬೇಕಾಯಿತು’ ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ವಿನೋಬಾ ಭಾವೆ ಅವರನ್ನು ಸ್ಮರಿಸಿದ ವೈದ್ಯ, ‘ನಾವು ಗುಲಾಮರಾಗಿದ್ದಾಗ ಸ್ವರಾಜ್ಯವು ಮುಖ್ಯವಾಗಿತ್ತು. ಈಗ ನಾವು ಸ್ವರಾಜ್ಯವನ್ನು ಸಾಧಿಸಿದ್ದೇವೆ; ನಾವು ಜನರಿಗೆ ಈಗ ಅವರ ಶಕ್ತಿಯ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಸಮಾಜವು ಸರ್ಕಾರದ ಮೇಲೆ ಹೆಚ್ಚು ಅವಲಂಬಿತವಾದಾಗ, ಅದು ದುರ್ಬಲವಾಗುತ್ತದೆ. ಸರ್ಕಾರದ ಮೇಲೆ ಕಡಿಮೆ ಅವಲಂಬಿತವಾಗಿರುವ ಸಮಾಜ ‘ಸ್ವದೇಶಿ’ ಸಮಾಜ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.