ADVERTISEMENT

23ನೇ ಕಾರ್ಗಿಲ್ ವಿಜಯ ದಿವಸ: ಈ ಯುದ್ಧದ ಕುರಿತು ತಿಳಿಯಲೇಬೇಕಾದ ಮುಖ್ಯ ಮಾಹಿತಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 7:09 IST
Last Updated 26 ಜುಲೈ 2022, 7:09 IST
ಕಾರ್ಗಿಲ್ ವಿಜಯ ದಿವಸ: ಹುತಾತ್ಮ ಯೋಧರಿಗೆ ಸೇನೆ ನಮನ– ‍ಪಿಟಿಐ ಚಿತ್ರ
ಕಾರ್ಗಿಲ್ ವಿಜಯ ದಿವಸ: ಹುತಾತ್ಮ ಯೋಧರಿಗೆ ಸೇನೆ ನಮನ– ‍ಪಿಟಿಐ ಚಿತ್ರ   

ಕಾರ್ಗಿಲ್‌ ಯುದ್ಧದಲ್ಲಿ ವಿಜಯ ಸಾಧಿಸಿದ 23ನೇ ವಾರ್ಷಿಕೋತ್ಸವದ ಅಂಗವಾಗಿ ಮಂಗಳವಾರ ಹುತಾತ್ಮ ಯೋಧರಿಗೆ ದೇಶದಾದ್ಯಂತ ಗೌರವ ಸಲ್ಲಿಸಲಾಗುತ್ತಿದೆ. 1999 ರ ಈ ದಿನದಂದು, ಕಾರ್ಗಿಲ್ ಸಂಘರ್ಷ ಎಂದೂ ಕರೆಯಲ್ಪಡುವ ಕಾರ್ಗಿಲ್ ಯುದ್ಧವು ಅಧಿಕೃತವಾಗಿ ಕೊನೆಗೊಂಡಿತ್ತು. ಪಾಕಿಸ್ತಾನಿ ನುಸುಳುಕೋರರು ವಶಪಡಿಸಿಕೊಂಡಿದ್ದ ಪರ್ವತ ಶ್ರೇಣಿಗಳನ್ನು ಭಾರತೀಯ ಸೈನಿಕರು ಯಶಸ್ವಿಯಾಗಿ ಮರು ವಶಕ್ಕೆ ಪಡೆದಿದ್ದರು.

ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವಿಟರ್ ಮೂಲಕ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ.

'ಕಾರ್ಗಿಲ್ ವಿಜಯ ದಿವಸವು ಭಾರತ ಮಾತೆಯ ಹೆಮ್ಮೆ ಮತ್ತು ವೈಭವದ ಸಂಕೇತವಾಗಿದೆ. ಈ ಸಂದರ್ಭದಲ್ಲಿ, ಮಾತೃಭೂಮಿಯ ರಕ್ಷಣೆಯಲ್ಲಿ ತಮ್ಮ ಶೌರ್ಯವನ್ನು ಪ್ರದರ್ಶಿಸಿದ ದೇಶದ ಎಲ್ಲಾ ವೀರ ಪುತ್ರರಿಗೆ ನನ್ನ ವಂದನೆಗಳು. ಜೈ ಹಿಂದ್!’ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ADVERTISEMENT


‘ಕಾರ್ಗಿಲ್ ವಿಜಯ ದಿವಸವಾದ ಇಂದು ನಮ್ಮ ಸಶಸ್ತ್ರ ಪಡೆಗಳ ಶೌರ್ಯ, ಧೈರ್ಯ ಮತ್ತು ತ್ಯಾಗಕ್ಕೆ ಭಾರತ ವಂದನೆ ಸಲ್ಲಿಸುತ್ತಿದೆ. ಅವರು ನಮ್ಮ ಮಾತೃಭೂಮಿಯನ್ನು ರಕ್ಷಿಸಲು ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ವೀರಾವೇಶದಿಂದ ಹೋರಾಡಿದ್ದರು. ಅವರ ಶೌರ್ಯ ಮತ್ತು ಅದಮ್ಯ ಮನೋಭಾವವು ಭಾರತದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ’ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಕಾರ್ಗಿಲ್ ಯುದ್ಧದ ಬಗ್ಗೆ ತಿಳಿಯಲೇಬೇಕಾದ ವಿಷಯಗಳು

* ಭಾರತೀಯ ಸೇನೆಯು ಜುಲೈ 26, 1999 ರಂದು ಪಾಕಿಸ್ತಾನವನ್ನು ಸೋಲಿಸಿತ್ತು. ಅಂದಿನಿಂದ, ಭಾರತೀಯ ಸಶಸ್ತ್ರ ಪಡೆಗಳ ಹೆಮ್ಮೆ ಮತ್ತು ಧೈರ್ಯವನ್ನು ಸ್ಮರಿಸುವುದಕ್ಕಾಗಿ ಈ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ.

* ಕಾರ್ಗಿಲ್ ಯುದ್ಧವು ಕೊನೆಯ ಬಾರಿಗೆ ಭಾರತ ಮತ್ತು ಪಾಕಿಸ್ತಾನದ ನಡಉವೆ ನಡೆದ ಪೂರ್ಣ ಪ್ರಮಾಣದ ಸಶಸ್ತ್ರ ಸಂಘರ್ಷಕ್ಕೆ ಸಾಕ್ಷಿಯಾಗಿತ್ತು. ಭಾರತ ಮತ್ತು ಪಾಕಿಸ್ತಾನವು ಪರಮಾಣು ಶಕ್ತಿಗಳಾದ ನಂತರ ನಡೆದ ಯುದ್ಧ ಇದಾಗಿದೆ.

* ಪಾಕಿಸ್ತಾನ ಸೇನೆಯು ಗಡಿ ನಿಯಂತ್ರಣ ರೇಖೆಯ ಮೂಲಕ ಭಾರತದೊಳಗೆ ನುಗ್ಗಿ ಆಯಕಟ್ಟಿನ ಪರ್ವತ ಶಿಖರಗಳನ್ನು ವಶಪಡಿಸಿಕೊಂಡಿದ್ದರಿಂದ ಕಾರ್ಗಿಲ್ ಯುದ್ಧ ನಡೆಯಿತು.

* ಮೇ 1999 ರಲ್ಲಿ ಒಳನುಸುಳುವಿಕೆಯನ್ನು ಮೊದಲು ಪತ್ತೆ ಹಚ್ಚಲಾಯಿತು, ಆದರೆ, ಆ ಸಮಯದಲ್ಲಿ ಒಳನುಗ್ಗುತ್ತಿರುವವರು ಉಗ್ರಗಾಮಿಗಳು ಅಥವಾ ಭಯೋತ್ಪಾದಕರು ಇರಬಹುದು. ಪಾಕಿಸ್ತಾನದ ಸೇನಾ ಪಡೆಗಳಲ್ಲ ಎಂದು ಭಾವಿಸಲಾಗಿತ್ತು.

* ಮೇ 9 ರಂದು, ಪಾಕಿಸ್ತಾನವು ಹೆಚ್ಚಿನ ಒಳನುಸುವಿಕೆಗೆ ಸಹಾಯ ಮಾಡಲು ಭಾರತದ ಕಡೆಗೆ ಭಾರೀ ಶೆಲ್ ದಾಳಿಯನ್ನು ಪ್ರಾರಂಭಿಸಿತು.

* ಭಾರತೀಯ ಸೇನೆಯು ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿತ್ತು. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್-ದ್ರಾಸ್ ಸೆಕ್ಟರ್ ಎತ್ತರದ ಪ್ರದೇಶ ಯುದ್ಧಭೂಮಿಯಾಯಿತು.

* ಮೇ ಅಂತ್ಯದ ವೇಳೆಗೆ, ಭಾರತೀಯ ವಾಯುಪಡೆಯು ಸೀಮಿತ ದಾಳಿಯನ್ನು ಪ್ರಾರಂಭಿಸಿತು. ಈ ಸಂದರ್ಭ ಐಎಎಫ್ ತನ್ನ ಎರಡು ಯುದ್ಧ ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್ ಅನ್ನು ಕಳೆದುಕೊಂಡಿತು. ಬಳಿಕ, ಪಾಕಿಸ್ತಾನ ಸೇನೆಯು ಆಕ್ರಮಿಸಿಕೊಂಡಿರುವ ಪ್ರಮುಖ ಸ್ಥಾನಗಳನ್ನು ಹಿಂಪಡೆಯಲು ಜೂನ್ ಮತ್ತು ಜುಲೈನಲ್ಲಿ ಭಾರತೀಯ ಸೇನೆಯ ದಾಳಿಯನ್ನು ಹೆಚ್ಚಿಸಲಾಯಿತು.

* ನಂತರದ ಕೆಲವು ವಾರಗಳಲ್ಲಿ, ಕಾರ್ಗಿಲ್‌ನ ಎತ್ತರ ಪ್ರದೇಶವನ್ನು ಮರಳಿ ಪಡೆಯಲು ಭಾರತೀಯ ಸೈನಿಕರು ವೀರಾವೇಶದ ಮೂಲಕ ಯುದ್ಧ ನಡೆಸಿದರು. ಆಗ, ಗಡಿ ನಿಯಂತ್ರಣ ರೇಖೆಯನ್ನು ದಾಟಿ ಒಳನುಗ್ಗಿದ್ದು ಪಾಕಿಸ್ತಾನದ ಸೇನೆಯೇ ಎಂಬುದು ಸ್ಪಷ್ಟವಾಯಿತು.

* ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತವು ಮಿಲಿಟರಿ ಮತ್ತು ರಾಜತಾಂತ್ರಿಕ ಪ್ರಕ್ರಿಯೆ ಪ್ರಾರಂಭಿಸಿತು, ಪಾಕಿಸ್ತಾನಿ ನುಸುಳುಕೋರರನ್ನು ವಶಕ್ಕೆ ಪಡೆದ ಸೇನೆಯು ಎತ್ತರದ ಪ್ರದೇಶದಿಂದ ಕೆಳಗೆ ತಳ್ಳಿತು. ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಕಪಟತನ ಬೆಳಕಿಗೆ ಬಂದಿತು.

* ಟೈಗರ್ ಹಿಲ್ ಯುದ್ಧವು ಮಹತ್ವದ ತಿರುವು ಕೊಟ್ಟಿತು. ಇದು ಕಾರ್ಗಿಲ್-ದ್ರಾಸ್ ವಲಯದ ಅತಿ ಎತ್ತರದ ಶಿಖರವಾಗಿದೆ. 11 ಗಂಟೆಗಳ ಕಾಲ ನಡೆದ ಗುಂಡಿನ ಕಾಳಗದ ನಂತರ ಭಾರತೀಯ ಸೇನೆ ಟೈಗರ್ ಹಿಲ್ ಅನ್ನು ಮರಳಿ ವಶಪಡಿಸಿಕೊಂಡಿತು. ಇಟಲಿಯಿಂದ ವಿವಾದಾತ್ಮಕ ಒಪ್ಪಂದದಲ್ಲಿ ಖರೀದಿಸಲಾಗಿದ್ದ ಬೋಫೋರ್ಸ್ ಬಂದೂಕುಗಳು ಎತ್ತರದ ಪ್ರದೇಶದಲ್ಲಿ ನಡೆದ ಈ ಯುದ್ಧದಲ್ಲಿ ಭಾರತೀಯ ಸೇನೆಗೆ ಅತ್ಯಂತ ಪರಿಣಾಮಕಾರಿ ಅಸ್ತ್ರವೆಂದು ಸಾಬೀತಾಯಿತು.

* ಭಾರತವು ಜುಲೈ 26, 1999 ರ ಹೊತ್ತಿಗೆ ಎಲ್ಲಾ ಶಿಖರ ಪ್ರದೇಶಗಳನ್ನು ಪುನಃ ವಶಪಡಿಸಿಕೊಂಡಿತು, ಕಾರ್ಗಿಲ್ ಸಂಘರ್ಷವನ್ನು ಕೊನೆಗೊಳಿಸಿತು.

* ಕಾರ್ಗಿಲ್ ಯುದ್ಧದಲ್ಲಿ 500 ಕ್ಕೂ ಹೆಚ್ಚು ಭಾರತೀಯ ಸೈನಿಕರು ಹುತಾತ್ನರಾದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.