ADVERTISEMENT

ಜ.13ಕ್ಕೆ ಮುಂಚೆಯೇ ಲಸಿಕೆ ನೀಡಿಕೆ ಅಭಿಯಾನ ಆರಂಭಿಸಲು ಸಜ್ಜು: ಆರೋಗ್ಯ ಸಚಿವಾಲಯ

ಪಿಟಿಐ
Published 5 ಜನವರಿ 2021, 17:48 IST
Last Updated 5 ಜನವರಿ 2021, 17:48 IST
ಪ್ರಾತಿನಿಧಿಕ ಚಿತ್ರ: ರಾಯಿಟರ್ಸ್ ಚಿತ್ರ
ಪ್ರಾತಿನಿಧಿಕ ಚಿತ್ರ: ರಾಯಿಟರ್ಸ್ ಚಿತ್ರ   

ನವದೆಹಲಿ: ಕೋವಿಡ್‌ ಪಿಡುಗು ಇಡೀ ಜಗತ್ತನ್ನು ಕಾಡಲು ಆರಂಭಿಸಿ ವರ್ಷದಲ್ಲಿ ಅದರ ವಿರುದ್ಧದ ಲಸಿಕೆ ಸಿದ್ಧವಾಗಿದೆ. ಎರಡು ಲಸಿಕೆಗಳನ್ನು ಹೊಂದಿರುವ ಭಾರತ, ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲು ಸಂಪೂರ್ಣವಾಗಿ ಸಜ್ಜಾಗಿದೆ.

‘ಇದೇ ತಿಂಗಳ 13ರೊಳಗೆ ಕೋವಿಡ್‌ ಲಸಿಕೆಯ ತುರ್ತು ಬಳಕೆ ಆರಂಭಿಸಲು ಸಿದ್ಧ’ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಹೇಳಿದ್ದಾರೆ.

ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್‌ ಯುನಿವರ್ಸಿಟಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್‌ ಮತ್ತು ಭಾರತ್‌ ಬಯೊಟೆಕ್‌ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್‌ ಲಸಿಕೆಗಳ ತುರ್ತು ಬಳಕೆಗೆ ಭಾರತದ ಔಷಧ ಮಹಾನಿಯಂತ್ರಕರು ಭಾನುವಾರ ಅನುಮೋದನೆ ನೀಡಿದ್ದಾರೆ. ಹಾಗಾಗಿ, ಕೋವಿಡ್‌ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲು ಹಾದಿ ಸುಗಮವಾಗಿದೆ.

ADVERTISEMENT

ಕೋವಿಡ್‌ ಮುಂಚೂಣಿ ಕಾರ್ಯಕರ್ತರು ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳುವ ಅಗತ್ಯ ಇಲ್ಲ. ಅವರ ಬಗೆಗಿನ ಮಾಹಿತಿಯು ಕೋ–ವಿನ್‌ ಲಸಿಕೆ ನೀಡಿಕೆ ನಿರ್ವಹಣಾ ವ್ಯವಸ್ಥೆಯಲ್ಲಿ ದಾಖಲಾಗಿದೆ ಎಂದು ಭೂಷಣ್‌ ತಿಳಿಸಿದ್ದಾರೆ.

ಲಸಿಕೆ ತಯಾರಿಕಾ ಸಂಸ್ಥೆಗಳಾದ ಸೆರಂ ಇನ್ಸ್‌ಟಿಟ್ಯೂಟ್‌ ಮತ್ತು ಭಾರತ್‌ ಬಯೊಟೆಕ್‌ ಜತೆಗೆ ಲಸಿಕೆ ಖರೀದಿಯ ಒಪ್ಪಂದವನ್ನು ಸರ್ಕಾರ ಇನ್ನೂ ಮಾಡಿಕೊಂಡಿಲ್ಲ. ಎರಡೂ ಕಂಪನಿಗಳು ಲಸಿಕೆ ದರದ ಬಗ್ಗೆ ಚೌಕಾಸಿ ನಡೆಸುತ್ತಿವೆ.

ಲಸಿಕೆಯ ರಫ್ತಿಗೆ ನಿಷೇಧ ಇದೆ ಎಂದು ಸೆರಂ ಸಂಸ್ಥೆಯು ಇತ್ತೀಚೆಗೆ ಹೇಳಿತ್ತು. ಆದರೆ, ಅಂತಹ ಯಾವುದೇ ನಿಷೇಧ ಇಲ್ಲ ಎಂದು ಭೂಷಣ್‌ ಅವರು ಸ್ಪಷ್ಟನೆ ನೀಡಿದ್ದಾರೆ.

ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ಆಶಾ ಕಾರ್ಯಕರ್ತೆಯರು ಮಂಗಳವಾರ ಮನೆ ಮನೆಗೆ ತೆರಳಿ ಕೋವಿಡ್‌ ಲಸಿಕೆ ಕುರಿತು ಸಮೀಕ್ಷೆ ನಡೆಸಿದರು –ಪ್ರಜಾವಾಣಿ ಚಿತ್ರ

ವಾಕ್ಸಮರಕ್ಕೆ ತೆರೆ

ಲಸಿಕೆ ತಯಾರಿಕಾ ಸಂಸ್ಥೆಗಳಾದ ಸೆರಂ ಇನ್ಸ್‌ಟಿಟ್ಯೂಟ್‌ ಮತ್ತು ಭಾರತ್‌ ಬಯೊಟೆಕ್‌ ನಡುವೆ ನಡೆದ ವಾಕ್ಸಮರಕ್ಕೆ ಮಂಗಳವಾರ ತೆರೆಬಿದ್ದಿದೆ. ಎರಡೂ ಸಂಸ್ಥೆಗಳು ಜಂಟಿ ಹೇಳಿಕೆ ನೀಡಿ, ಕೋವಿಡ್‌–19 ಲಸಿಕೆ ನೀಡಿಕೆಯು ಸುಗಮವಾಗಿ ನಡೆಯುವುದಕ್ಕೆ ಎಲ್ಲ ಸಹಕಾರ ನೀಡುವುದಾಗಿ ಹೇಳಿವೆ.

ಸೆರಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದಾರ್‌ ಪೂನಾವಾಲಾ ಅವರು ಮಾತನಾಡಿ ‘ಫೈಝರ್‌, ಮೊಡೆರ್ನಾ ಮತ್ತು ಕೋವಿಶೀಲ್ಡ್‌ ಮಾತ್ರ ಕೋವಿಡ್‌ ತಡೆಗೆ ಪರಿಣಾಮಕಾರಿ ಎಂದು ಸಾಬೀತಾಗಿವೆ. ಉಳಿದ ಎಲ್ಲವೂ ನೀರಿನ ಹಾಗೆ’ ಎಂದು ಹೇಳಿದ್ದರು.

ಭಾರತ್‌ ಬಯೊಟೆಕ್‌ ಮುಖ್ಯಸ್ಥ ಕೃಷ್ಣ ಎಲ್ಲ ಅವರು ಇದಕ್ಕೆ ತಿರುಗೇಟು ನೀಡಿದ್ದರು. ‘ಭಾರತದಲ್ಲಿ ಮತ್ತು ಬಹುಶಃ ಅಭಿವೃದ್ಧಿಶೀಲ ಜಗತ್ತಿನಲ್ಲಿ ಅತ್ಯಂತ ದೊಡ್ಡ ಪ್ರಯೋಗ ನಡೆಸಿದ ಬಳಿಕವೂ ನಮ್ಮ ವಿರುದ್ಧ ಕಿಡಿಕಾರಲಾಗುತ್ತಿದೆ’ ಎಂದಿದ್ದರು.

ಈಗ, ಎರಡೂ ಕಂಪನಿಗಳು ಜಂಟಿ ಹೇಳಿಕೆ ನೀಡುವ ಮೂಲಕ ಭಿನ್ನಾಭಿಪ್ರಾಯ ಬದಿಗೆ ಸರಿಸಿವೆ.

ಲಸಿಕೆ ಹಂಚಿಕೆ ಹೇಗೆ?

* ಸೆರಂ ಮತ್ತು ಭಾರತ್‌ ಬಯೊಟೆಕ್‌ನಿಂದ ಪರೀಕ್ಷೆಗೆ ಒಳಪಟ್ಟ ಲಸಿಕೆಗಳು ಕೇಂದ್ರ ಸರ್ಕಾರದ ತಾಪಮಾನ ನಿಯಂತ್ರಿತ ಬೃಹತ್‌ ಡಿಪೊಗಳಿಗೆ ತಲುಪುತ್ತವೆ

* ಕರ್ನಾಲ್‌, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಈ ಡಿಪೊಗಳು ಇವೆ

* ಬಳಿಕ, ರಾಜ್ಯ ಮಟ್ಟದ 37 ಡಿಪೊಗಳಿಗೆ ಲಸಿಕೆ ಹಂಚಿಕೆ ಆಗಲಿದೆ

* ಇಲ್ಲಿಂದ ಲಸಿಕೆಗಳು ಜಿಲ್ಲೆಗಳಿಗೆ ಸಾಗಾಟ ಆಗಲಿವೆ. ಅಲ್ಲಿ ಲಸಿಕೆ ನೀಡಿಕೆ ನಡೆಯಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.