ಕೇಂದ್ರ ಸಚಿವ ಕಿರಣ್ ರಿಜಿಜು
ನವದೆಹಲಿ: ವಿಶ್ವದಲ್ಲೆ ಭಾರತ ಅಲ್ಪಸಂಖ್ಯಾತರಿಗೆ ಸುರಕ್ಷಿತವಾದ ಸ್ಥಳವಾಗಿದೆ ಎಂದು ಲೋಕಸಭೆಯಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಬುಧವಾರ ಹೇಳಿದರು.
ವಕ್ಫ್ (ತಿದ್ದುಪಡಿ) ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತರಲ್ಲ ಎಂದು ಕೆಲವರು ಹೇಳುತ್ತಾರೆ, ಆದರೆ ಅವರ ಹೇಳಿಕೆ ಸಂಪೂರ್ಣ ತಪ್ಪು, ಅಲ್ಪಸಂಖ್ಯಾತರಿಗೆ ಭಾರತಕ್ಕಿಂತ ಸುರಕ್ಷಿತವಾದ ಸ್ಥಳವಿಲ್ಲ, ನಾನು ಕೂಡ ಅಲ್ಪಸಂಖ್ಯಾತನಾಗಿದ್ದು, ಇಲ್ಲಿ ಯಾವುದೇ ಭಯವಿಲ್ಲದೆ, ಗೌರವದಿಂದ ಬದುಕುತ್ತಿದ್ದೇನೆ ಎಂದು ಅವರು ಹೇಳಿದರು.
ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾ ಸೇರಿದಂತೆ ಕೆಲವು ದೇಶಗಳಲ್ಲಿರುವ ಅಲ್ಪಸಂಖ್ಯಾತರು ಅಲ್ಲಿನ ಧಾರ್ಮಿಕ ಹಿಂಸೆಯನ್ನು ತಾಳಲಾರದೇ ಭಾರತಕ್ಕೆ ಬಂದಿದ್ದಾರೆ. ಅಂತಹವರಿಗೂ ಭಾರತ ಅವಕಾಶ ಕಲ್ಪಿಸಿದೆ ಎಂದು ಟಿಬೆಟಿಯನ್ನರು ಹಾಗೂ ಧರ್ಮಗುರು ದಲೈಲಾಮಾ ಅವರನ್ನು ಉಲ್ಲೇಖಿಸಿದರು.
ಇಂತಹ ಉದಾಹರಣೆಗಳು ಇರುವಾಗ, ನೀವು ಹೇಗೆ ಅಲ್ಪಸಂಖ್ಯಾತರು ಭಾರತದಲ್ಲಿ ಸುರಕ್ಷಿತರಲ್ಲ ಎಂದು ಹೇಳುತ್ತೀರಾ? ಎಂದು ಪ್ರಶ್ನೆ ಮಾಡಿದರು. ಮುಂದಿನ ಪೀಳಿಗೆ ನಿಮ್ಮನ್ನು ಎಂದಿಗೂ ಕ್ಷಮಿಸದು ಎಂದು ರಿಜಿಜು ಹೇಳಿದರು.
ಎನ್‌ಡಿಎ ಸರ್ಕಾರ ದೇಶದ ಎಲ್ಲಾ ಅಲ್ಪಸಂಖ್ಯಾತರನ್ನು ಒಟ್ಟುಗೂಡಿಸಲು ಪ್ರತ್ನಿಸುತ್ತಿದೆ. ಮಸೂದೆಗೆ ಕ್ರಿಶ್ಚಿಯನ್ ಸಮುದಾಯದ ಸಂಪೂರ್ಣ ಬೆಂಬಲ ಇದೆ ಎಂದರು.
ವಕ್ಫ್ (ತಿದ್ದುಪಡಿ) ಮಸೂದೆ ವಿಚಾರವಾಗಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ನಡೆಸಿದ ವಿಸ್ತೃತ ಸಮಾಲೋಚನಾ ಪ್ರಕ್ರಿಯೆ ದೇಶದ ಪ್ರಜಾಪ್ರಭುತ್ವ ಇತಿಹಾಸದಲ್ಲೇ ನಡೆದ ಅತಿದೊಡ್ಡ ಸಮಾಲೋಚನಾ ಪ್ರಕ್ರಿಯೆ ಎಂದರು.
ಈ ಕುರಿತು ಜೆಪಿಸಿ ವೈಯಕ್ತಿಕವಾಗಿ ಮತ್ತು ಆನ್ಲೈನ್ ಮೂಲಕ 97.27 ಲಕ್ಷ ಅರ್ಜಿಗಳು ಮತ್ತು ಜ್ಞಾಪನಾ ಪತ್ರಗಳನ್ನು ಸ್ವೀಕರಿಸಿದೆ. ಪ್ರತಿಯೊಂದನ್ನೂ ಜೆಪಿಸಿ ತನ್ನ ಅಂತಿಮ ವರದಿಗೂ ಮುನ್ನ ಪರಿಶೀಲಿಸಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.