ADVERTISEMENT

ಯುದ್ಧ ವಿಧಾನಕ್ಕೆ ಅನುಗುಣವಾಗಿ ಮಿಲಿಟರಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕಿದೆ: ಮೋದಿ

ಪಿಟಿಐ
Published 4 ನವೆಂಬರ್ 2021, 8:13 IST
Last Updated 4 ನವೆಂಬರ್ 2021, 8:13 IST
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿಭಾಗ ನೌಶೇರ ಸೆಕ್ಟರ್‌ಗೆ ಗುರುವಾರ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಗಡಿ ಕಾಯುವ ಯೋಧರೊಬ್ಬರಿಗೆ ಸಿಹಿ ತಿನ್ನಿಸಿದರು.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿಭಾಗ ನೌಶೇರ ಸೆಕ್ಟರ್‌ಗೆ ಗುರುವಾರ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಗಡಿ ಕಾಯುವ ಯೋಧರೊಬ್ಬರಿಗೆ ಸಿಹಿ ತಿನ್ನಿಸಿದರು.   

ನೌಶೇರ (ಜಮ್ಮು ಮತ್ತು ಕಾಶ್ಮೀರ): ಬದಲಾಗುತ್ತಿರುವ ಜಗತ್ತು ಮತ್ತು ಯುದ್ಧ ವಿಧಾನಗಳಿಗೆ ಅನುಗುಣವಾಗಿಭಾರತ ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

ಯೋಧರೊಂದಿಗೆ ದೀಪಾವಳಿ ಆಚರಿಸುವ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ಭಾಗ ನೌಶೇರ ಸೆಕ್ಟರ್‌ಗೆ ಗುರುವಾರ ಭೇಟಿ ನೀಡಿದ್ದ ಅವರು ಯೋಧರನ್ನು ಉದ್ದೇಶಿಸಿ ಮಾತನಾಡಿದರು.

‘ಸಂಪರ್ಕ ಮತ್ತು ಸೇನಾ ನಿಯೋಜನೆ ಹೆಚ್ಚಿಸುವ ಉದ್ದೇಶದಿಂದ ಗಡಿ ಪ್ರದೇಶಗಳಲ್ಲಿ ಆಧುನಿಕ ಗಡಿ ಮೂಲಸೌಕರ್ಯ ಒದಗಿಸಲಾಗಿದೆ . ಲಡಾಖ್‌ನಿಂದ ಅರುಣಾಚಲ ಪ್ರದೇಶ, ಜೈಸಲ್ಮೇರ್‌ನಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಗಡಿ ಪ್ರದೇಶಗಳಲ್ಲಿ ಸಂಪರ್ಕವು ಸುಧಾರಿಸಿದೆ‘ ಎಂದು ಅವರು ಹೇಳಿದರು.

ADVERTISEMENT

‘ಸಾಮಾನ್ಯ ಸಂಪರ್ಕದ ಕೊರತೆ ಎದುರಿಸುತ್ತಿದ್ದ ಗಡಿಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ಈಗ ರಸ್ತೆಗಳು ಸುಧಾರಿಸಿವೆ. ಆಪ್ಟಿಕಲ್ ಫೈಬರ್‌ಗಳನ್ನು ಅಳವಡಿಸಲಾಗಿದೆ. ಇದು ಸೇನಾ ಪಡೆಗಳ ನಿಯೋಜನೆಯ ಹಿನ್ನೆಲೆಯಲ್ಲಿ, ಮೂಲ ಸೌಲಭ್ಯಗಳನ್ನು ಸಾಮರ್ಥ್ಯಗಳನ್ನು ಮತ್ತು ಸೈನಿಕರಿಗೆ ಸೌಲಭ್ಯಗಳನ್ನು ಹೆಚ್ಚಿಸುತ್ತದೆ‘ ಎಂದು ಪ್ರಧಾನಿ ಹೇಳಿದರು.

‘ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿರುವ ಸೇನಾ ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಸೆಪ್ಟೆಂಬರ್ 29, 2016 ರಂದು ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮೂಲಕ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು ಎಂದು ನೆನಪಿಸಿದ ಮೋದಿಯವರು, ಸರ್ಜಿಕಲ್ ಸ್ಟ್ರೈಕ್‌ನಲ್ಲಿ ಬ್ರಿಗೇಡ್‌ ಪಾತ್ರವನ್ನು ಶ್ಲಾಘಿಸಿದರು.

‘ಸರ್ಜಿಕಲ್ ಸ್ಟ್ರೈಕ್ ನಂತರ ಈ ಭಾಗದಲ್ಲಿ ಭಯೋತ್ಪಾಕ ಕೃತ್ಯಗಳನ್ನು ಹರಡಲು ಹಲವು ಪ್ರಯತ್ನಗಳನ್ನು ಮಾಡಲಾಯಿತು ಆದರೆ ಅವರಿಗೆ ತಕ್ಕ ಉತ್ತರವನ್ನು ನೀಡಿದ್ದೇವೆ‘ ಎಂದು ಹೇಳಿದರು.

ಈ ಹಿಂದೆ ದೇಶವು ರಕ್ಷಣಾ ವಲಯದಲ್ಲಿ ಆಮದಿನ ಮೇಲೆ ಹೆಚ್ಚಾಗಿ ಅವಲಂಬಿತವಾಗಿತ್ತು. ಆದರೆ ನಮ್ಮ ಸರ್ಕಾರದ ಹಲವು ಪ್ರಯತ್ನಗಳಿಂದ ದೇಶೀಯ ರಕ್ಷಣಾ ಸಾಮರ್ಥ್ಯಕ್ಕೆ ಉತ್ತೇಜನ ದೊರೆತಿದೆ‘ ಎಂದು ಅವರು ಹೇಳಿದರು.

‘ನಾನು ಪ್ರತಿ ವರ್ಷ ದೀಪಾವಳಿಯನ್ನು ಕುಟುಂಬ ಸದಸ್ಯರೊಂದಿಗೆ ಕಳೆಯಲು ಬಯಸುತ್ತೇನೆ. ಹಾಗಾಗಿ ನಾನು ಈ ಹಬ್ಬದಲ್ಲಿ ನಿಮ್ಮ ಜೊತೆಗಿದ್ದೇನೆ‘ ಎಂದು ಹೇಳಿದರು.

ಪ್ರಧಾನಿ ಭೇಟಿಗೆ ಮುನ್ನ ಬುಧವಾರದಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರು ರಜೌರಿ ಸೇರಿದಂತೆ ಮುಂಚೂಣಿ ಪ್ರದೇಶಗಳಲ್ಲಿ ವೈಮಾನಿಕ ತಪಾಸಣೆ ಕೈಗೊಂಡರು. ಜಮ್ಮು ಪ್ರದೇಶದ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಚಾಲ್ತಿಯಲ್ಲಿರುವ ಭದ್ರತಾ ಪರಿಸ್ಥಿತಿಯನ್ನೂ ಅವಲೋಕಿಸಿದರು.

ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ, ಮೊದಲ ಬಾರಿಗೆ ದೀಪಾವಳಿಯನ್ನು ಸಿಯಾಚಿನ್‌ನಲ್ಲಿರುವ ಯೋಧರೊಂದಿಗೆ ಆಚರಿಸಿದ್ದರು.

ಪೂಂಚ್-ರಜೌರಿ ಪ್ರದೇಶದ ಅರಣ್ಯ ವಲಯದ ಮೂಲಕ ಭಯೋತ್ಪಾದಕರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಯುತ್ತಿದೆ. ಇದು ಇತ್ತೀಚಿನ ದಿನಗಳಲ್ಲಿ ನಡೆದಿರುವ ಮೊದಲ ಸುದೀರ್ಘ ಕಾರ್ಯಾಚರಣೆಯಾಗಿದ್ದು, ಗುರುವಾರ 26 ನೇ ದಿನಕ್ಕೆ ಕಾಲಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.