ADVERTISEMENT

ಭಾರತ–ಮ್ಯಾನ್ಮಾರ್ ನಡುವಿನ 1,643 ಕಿ.ಮೀ ಉದ್ದದ ಸಂಪೂರ್ಣ ಗಡಿಗೆ ಬೇಲಿ: ಅಮಿತ್ ಶಾ

ಪಿಟಿಐ
Published 6 ಫೆಬ್ರುವರಿ 2024, 15:57 IST
Last Updated 6 ಫೆಬ್ರುವರಿ 2024, 15:57 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ: ಮ್ಯಾನ್ಮಾರ್‌ ಜೊತೆಗಿನ ಮುಕ್ತ ಚಲನೆಯ ಒಪ್ಪಂದವನ್ನು(ಎಫ್‌ಎಂಆರ್) ಅಧಿಕೃತವಾಗಿ ರದ್ದುಮಾಡುವ ಪ್ರಸ್ತಾಪದ ಬೆನ್ನಲ್ಲೇ ಇಡೀ 1,643 ಕಿ.ಮೀ ಉದ್ದದ ಗಡಿಯಲ್ಲಿ ಬೇಲಿ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಹೇಳಿದ್ದಾರೆ.

ನುಸುಳಲಾಗದಂತಹ ಗಡಿಗಳನ್ನು ನಿರ್ಮಿಸಲು ಮೋದಿ ಸರ್ಕಾರವು ಬದ್ಧವಾಗಿದೆ ಎಂದು ಪ್ರತಿಪಾದಿಸಿದ ಅವರು, ಗಡಿಯಲ್ಲಿ ಗಸ್ತು ಟ್ರ್ಯಾಕ್ ಅನ್ನು ಸಹ ಸುಗಮಗೊಳಿಸಲಾಗುವುದು ಎಂದು ಹೇಳಿದ್ದಾರೆ.

‘ಮಣಿಪುರದ ಮೊರೆಹ್‌ನ ಗಡಿಯ 10 ಕಿಮೀ ವ್ಯಾಪ್ತಿಯಲ್ಲಿ ಈಗಾಗಲೇ ಬೇಲಿ ಹಾಕಲಾಗಿದೆ. ಇದಲ್ಲದೆ, ಹೈಬ್ರಿಡ್ ಕಣ್ಗಾವಲು ವ್ಯವಸ್ಥೆ (ಎಚ್‌ಎಸ್‌ಎಸ್) ಮೂಲಕ ಫೆನ್ಸಿಂಗ್‌ನ ಎರಡು ಪೈಲಟ್ ಯೋಜನೆಗಳು ಕಾರ್ಯಗತಗೊಳ್ಳುತ್ತಿವೆ. ಮಣಿಪುರದಲ್ಲಿ ಸರಿಸುಮಾರು 20 ಕಿ.ಮೀ ವ್ಯಾಪ್ತಿಯ ಬೇಲಿ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಶೀಘ್ರದಲ್ಲೇ ಕೆಲಸ ಪ್ರಾರಂಭವಾಗಲಿದೆ" ಎಂದು ಅವರು ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

ಮುಕ್ತ ಚಲನೆಯ ಒಪ್ಪಂದವು(ಎಫ್‌ಎಂಆರ್) ದ್ವಿಪಕ್ಷೀಯ ವ್ಯವಸ್ಥೆಯಾಗಿದ್ದು, ಇದು ಭಾರತ ಅಥವಾ ಮ್ಯಾನ್ಮಾರ್‌ನ ಗುಡ್ಡಗಾಡು ಬುಡಕಟ್ಟು ಜನಾಂಗದವರಿಗೆ ಮತ್ತು ಎರಡೂ ಬದಿಯಲ್ಲಿರುವ 16 ಕಿ.ಮೀ ವ್ಯಾಪ್ತಿಯ ಪ್ರದೇಶದ ನಿವಾಸಿಗಳಿಗೆ ಗಡಿ ದಾಟಲು ಮತ್ತು ಎರಡು ವಾರಗಳವರೆಗೆ ಉಳಿಯಲು ಅನುವು ಮಾಡಿಕೊಡುತ್ತದೆ. ಈ ಕ್ರಮವನ್ನು ಕುಕಿ, ಮಿಜೋ ಮತ್ತು ನಾಗಾ ಸಂಘಟನೆಗಳು ವಿರೋಧಿಸುತ್ತಿವೆ.

ಎಫ್‌ಎಂಆರ್ ರದ್ದುಗೊಳಿಸಲಾಗುವುದು ಎಂದು ಅಮಿತ್ ಶಾ ಇತ್ತೀಚೆಗೆ ಹೇಳಿದ್ದರು. ಮಂಗಳವಾರದ ತಮ್ಮ ಪೋಸ್ಟ್‌ನಲ್ಲಿ ಈ ಬಗ್ಗೆ ಅವರು ಹೆಚ್ಚಿನ ಮಾಹಿತಿ ನೀಡಿಲ್ಲ. ಮ್ಯಾನ್ಮಾರ್ ಜೊತೆಗಿನ ಮಾತುಕತೆ ಬಳಿಕವೇ ನಿರ್ಧಾರ ಕೈಗೊಳ್ಳಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.