ADVERTISEMENT

ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ 40–50 ಗಗನಯಾನಿಗಳು ಬೇಕು; ಮೋದಿ

ಪಿಟಿಐ
Published 19 ಆಗಸ್ಟ್ 2025, 10:40 IST
Last Updated 19 ಆಗಸ್ಟ್ 2025, 10:40 IST
   

ನವದೆಹಲಿ: 20 ದಿನಗಳ ಬಾಹ್ಯಾಕಾಶಯಾನ ಮುಗಿಸಿ ಭೂಮಿಗೆ ಆಗಮಿಸಿದ ನಂತರ ಇದೀಗ ಭಾರತಕ್ಕೆ ಮರಳಿರುವ ಗಗನಯಾನಿ ಶುಭಾಂಶು ಶುಕ್ಲಾ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಭವಿಷ್ಯದ ಬಾಹ್ಯಾಕಾಶ ಯೋಜನೆಗಳನ್ನು ಮುನ್ನಡೆಸಲು 40-50 ಗಗನಯಾನಿಗಳ ಗುಂಪನ್ನು ಭಾರತ ನಿರ್ಮಿಸಬೇಕಾಗಿದೆ ಎಂದು ಹೇಳಿದ್ದಾರೆ.

ಆಕ್ಸಿಯಂ -4 ಮಿಷನ್‌ನ ವಾಣಿಜ್ಯ ಕಾರ್ಯಾಚರಣೆಯ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಪ್ರಯಾಣಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಶುಕ್ಲಾ, ಭಾರತದ ಗಗನಯಾನ ಕಾರ್ಯಾಚರಣೆಯ ಬಗ್ಗೆ ಪ್ರಪಂಚದಾದ್ಯಂತ ಅಪಾರ ಆಸಕ್ತಿ ಇದೆ ಎಂದು ಪ್ರಧಾನಿಗೆ ತಿಳಿಸಿದರು.

ಶುಕ್ಲಾ ಸೋಮವಾರ ಸಂಜೆ ಮೋದಿ ಅವರನ್ನು ಭೇಟಿಯಾಗಿ ಐಎಸ್‌ಎಸ್‌ನಲ್ಲಿ ಕಳೆದ ಸಮಯ, ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಮತ್ತು ಕಕ್ಷೆಯ ಪ್ರಯೋಗಾಲಯದಲ್ಲಿ ಅವರು ನಡೆಸಿದ ಪ್ರಯೋಗಗಳ ಅನುಭವಗಳನ್ನು ಹಂಚಿಕೊಂಡರು. ಸಂವಾದದ ವಿಡಿಯೊವನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.

ADVERTISEMENT

ಭಾರತದ ಭವಿಷ್ಯದ ಕಾರ್ಯಾಚರಣೆಗಳಿಗೆ 40-50 ಗಗನಯಾನಿಗಳ ಗುಂಪನ್ನು ಸಿದ್ಧಪಡಿಸುವ ಅವಶ್ಯಕತೆ ಇದೆ. ಶುಕ್ಲಾ ಅವರ ಬಾಹ್ಯಾಕಾಶ ಪ್ರಯಾಣವು ಭವಿಷ್ಯದ ಕಾರ್ಯಾಚರಣೆಗಳಿಗೆ ಮೊದಲ ಹೆಜ್ಜೆಯಾಗಿದೆ ಎಂದು ಮೋದಿ ಬಣ್ಣಿಸಿದರು.

ಶುಕ್ಲಾ ಅವರ ಬಾಹ್ಯಾಕಾಶಯಾನವು ಈ ವಲಯದಲ್ಲಿ ಹೆಚ್ಚಿನ ನಂಬಿಕೆ ಮತ್ತು ಆಸಕ್ತಿಯನ್ನು ಹುಟ್ಟುಹಾಕಿದೆ ಎಂದು ಮೋದಿ ಹೇಳಿದರು.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮತ್ತು ಗಗನಯಾನ ಯೋಜನೆಗಳನ್ನು ಭಾರತ ಹೊಂದಿದೆ. ಶುಕ್ಲಾ ಅವರ ಅನುಭವವು ಈ ಪ್ರಯತ್ನಗಳಲ್ಲಿ ಹೆಚ್ಚಿನ ಮೌಲ್ಯವನ್ನು ಹೊಂದಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಚಂದ್ರಯಾನ-II ನಂತಹ ಹಿನ್ನಡೆಗಳ ಹೊರತಾಗಿಯೂ, ಈ ಎರಡು ಯೋಜನೆಗಳು ದೇಶಕ್ಕೆ ಒಂದು ಪ್ರಮುಖ ಅವಕಾಶವನ್ನು ಒದಗಿಸಿವೆ. ಬಾಹ್ಯಾಕಾಶ ವಲಯಕ್ಕೆ ಸರ್ಕಾರದ ನಿರಂತರ ಬದ್ಧತೆಯು ಶ್ಲಾಘನೀಯ ಎಂದು ಶುಕ್ಲಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.