ADVERTISEMENT

Covid-19 India Update| ಚೇತರಿಕೆ ಪ್ರಮಾಣ ಶೇ 93ಕ್ಕೆ ಏರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ನವೆಂಬರ್ 2020, 16:56 IST
Last Updated 13 ನವೆಂಬರ್ 2020, 16:56 IST
ಕೊರೊನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆಯ ಪ್ರಾತಿನಿಧಿಕ ಚಿತ್ರ (ಪಿಟಿಐ)
ಕೊರೊನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆಯ ಪ್ರಾತಿನಿಧಿಕ ಚಿತ್ರ (ಪಿಟಿಐ)   

ನವದೆಹಲಿ: ದೇಶದಲ್ಲಿ ಶುಕ್ರವಾರ ಹೊಸದಾಗಿ 44,879 ಕೋವಿಡ್‌–19 ಪ್ರಕರಣಗಳ ದಾಖಲಾಗಿದ್ದು, ಒಟ್ಟು ಸಂಖ್ಯೆ 87.28 ಲಕ್ಷಕ್ಕೆ ಏರಿದೆ. ಸೋಂಕಿತರಲ್ಲಿ 81.15 ಲಕ್ಷ ಜನರು ಗುಣಮುಖರಾಗಿದ್ದು, ಚೇತರಿಕೆಯ ಪ್ರಮಾಣ ಶೇ 92.97ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಹೊಸದಾಗಿ ಒಟ್ಟು 547 ಜನರು ಕೋವಿಡ್‌ನಿಂದ ಮೃತಪಟ್ಟಿದ್ದು, ಮೃತರ ಸಂಖ್ಯೆ 1,28,668ಕ್ಕೆ ಏರಿದೆ. ಮಹಾರಾಷ್ಟ್ರದಲ್ಲಿ 122, ದೆಹಲಿಯಲ್ಲಿ 104 ಗರಿಷ್ಠ ಸಾವು ಪ್ರಕರಣಗಳು ದಾಖಲಾಗಿವೆ. ಒಟ್ಟು 4,84,547 ಸಕ್ರಿಯ ಕೋವಿಡ್‌ ಪ್ರಕರಣಗಳಿದ್ದು, ಇದು ಒಟ್ಟು ಪ್ರಕರಣದ ಶೇ 5.55ರಷ್ಟು ಎಂದು ಸಚಿವಾಲಯವು ತಿಳಿಸಿದೆ.

7–10 ದಿನದೊಳಗೆ ನಿಯಂತ್ರಣಕ್ಕೆ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿವೆ. ಏಳರಿಂದ ಹತ್ತು ದಿನದೊಳಗಾಗಿ ಇದು ನಿಯಂತ್ರಣಕ್ಕೆ ಬರಲಿದೆ. ಇದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಶುಕ್ರವಾರ ತಿಳಿಸಿದರು.

ADVERTISEMENT

ದೆಹಲಿಯಲ್ಲಿ ಗುರುವಾರ 7,053 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಇದು ಕಳೆದ ಐದು ತಿಂಗಳಲ್ಲೇ ಅಧಿಕವಾಗಿದೆ. ಸೋಂಕು ಪ್ರಕರಣಗಳ ಏರಿಕೆಗೆ ಮಾಲಿನ್ಯವೂ ಕಾರಣ ಎಂದು ಕೇಜ್ರಿವಾಲ್‌ ಅವರು ಪ್ರತಿಪಾದಿಸಿದರು.

ಜನವರಿ–ಫೆಬ್ರುವರಿಯಲ್ಲಿ ಎರಡನೇ ಅಲೆ?: ಜನವರಿ ಅಥವಾ ಫೆಬ್ರುವರಿಯಲ್ಲಿ ಕೋವಿಡ್‌–19 ಪಿಡುಗಿನ ಎರಡನೇ ಅಲೆ ಕಾಣಿಸುವ ಸಂಭವವಿದ್ದು, ಪ್ರಯೋಗಾಲಯಗಳು ಸಕ್ರಿಯವಾಗಿರಬೇಕು ಎಂದು ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ.

‘ಯುರೋಪ್‌ನಲ್ಲಿ ಕೋವಿಡ್‌–19 ಮತ್ತೆ ವ್ಯಾಪಿಸುತ್ತಿರುವುದನ್ನು ಆಧರಿಸಿ ಎರಡನೇ ಅಲೆಯನ್ನು ನಿರೀಕ್ಷಿಸಲಾಗಿದೆ. ಹಲವು ರಾಷ್ಟ್ರಗಳಲ್ಲಿ ಎರಡನೇ ಅಲೆಯು ಕಾಣಿಸಿಕೊಂಡಿದೆ’ ಎಂದು ತಿಳಿಸಿದೆ.

‘ಕೋವಿಡ್‌–19 ಸೋಂಕಿತರು ಹಾಗೂ ಉಸಿರಾಟದ ಸಮಸ್ಯೆ ಇರುವವರನ್ನು ಗಮನದಲ್ಲಿ ಇರಿಸಿಕೊಂಡು ಈ ಬಾರಿ ಪಟಾಕಿ ರಹಿತ ದೀಪಾವಳಿ ಆಚರಿಸುವುದಕ್ಕೆ ಆದ್ಯತೆ ನೀಡಬೇಕು’ ಎಂದು ಸರ್ಕಾರ ಈ ಕುರಿತ ಆದೇಶದಲ್ಲಿ ಉಲ್ಲೇಖಿಸಿದೆ.

‘ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರಗಳ ಜೊತೆ ಕಾರ್ಯನಿರ್ವಹಿಸಲು ಬದ್ಧ’

ವಿಶ್ವಸಂಸ್ಥೆ: ‘ಕೋವಿಡ್–19’ ವಿರುದ್ಧದ ಹೋರಾಟದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಜತೆಗೂಡಿ ಕೆಲಸ ಮಾಡಲು ಬದ್ಧ ಎಂದು ಜಿ–77 ಸಚಿವರ 44ನೇ ವಾರ್ಷಿಕ ಸಭೆಯಲ್ಲಿ ಭಾರತವು ಹೇಳಿದೆ.

‘ಕೋವಿಡ್‌ ಪಿಡುಗಿನಿಂದಾಗಿ ಲಕ್ಷಾಂತರ ಜನರು ಮತ್ತೆ ಬಡತನಕ್ಕೆ ಒಳಗಾಗಲಿದ್ದಾರೆ. ಇಂಥ ಸ್ಥಿತಿಯಲ್ಲಿ ಜಿ–77 ರಾಷ್ಟ್ರಗಳು ಅಭಿವೃದ್ಧಿ ಪಥದಲ್ಲೇ ಹೆಜ್ಜೆ ಹಾಕಲು ಜೊತೆಯಾಗಿ ಧ್ವನಿ ಎತ್ತಬೇಕು’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯ ಕಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಹೇಳಿದರು.

ಭಾರತವು 150ಕ್ಕೂ ಅಧಿಕ ರಾಷ್ಟ್ರಗಳಿಗೆ ತುರ್ತು ವೈದ್ಯಕೀಯ ಸೇವೆಯ ನೆರವನ್ನು ಯಾವುದೇ ಷರತ್ತುಗಳಿಲ್ಲದೇ ನೀಡಲಾಗುತ್ತಿದೆ’ ಎಂದು ಅವರು ಹೇಳಿದರು.

12.31 ಕೋಟಿ ಜನರಿಗೆ ಕೋವಿಡ್ ಟೆಸ್ಟ್‌
ನವೆಂಬರ್‌ 12ರಂದು ಒಟ್ಟು 11,39,230 ಜನರಿಗೆ ಕೋವಿಡ್‌–19 ಮಾದರಿ ಪರೀಕ್ಷೆ ನಡೆಸಲಾಗಿದೆ. ಇಲ್ಲಿಯವರೆಗೆ ಒಟ್ಟು 12 ಕೋಟಿ 31 ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.