
ನವದೆಹಲಿ: ಶಕ್ಸ್‌ಗಮ್ ಕಣಿವೆಯಲ್ಲಿ ಚೀನಾದ ಮೂಲಸೌಕರ್ಯ ಚಟುವಟಿಕೆಗಳನ್ನು ಭಾರತ ಶುಕ್ರವಾರ ತೀವ್ರವಾಗಿ ಖಂಡಿಸಿದೆ. ಈ ಪ್ರದೇಶವು ತನ್ನದು ಎಂದು ಪುನರುಚ್ಚರಿಸಿರುವ ಭಾರತ, ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಪ್ರತಿಪಾದಿಸಿದೆ.
ಪಾಕಿಸ್ತಾನವು ಶಕ್ಸ್‌ಗಮ್ ಕಣಿವೆಯಲ್ಲಿ 5,180 ಚದರ ಕಿ.ಮೀ. ಭಾರತೀಯ ಭೂಪ್ರದೇಶವನ್ನು ಅಕ್ರಮವಾಗಿ ಚೀನಾಕ್ಕೆ ಬಿಟ್ಟುಕೊಟ್ಟ 1963ರ ಚೀನಾ-ಪಾಕಿಸ್ತಾನ ಗಡಿ ಒಪ್ಪಂದವನ್ನು ಭಾರತ ಎಂದಿಗೂ ಒಪ್ಪಿಕೊಂಡಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
‘ಶಕ್ಸ್‌ಗಮ್ ಕಣಿವೆ ಭಾರತೀಯ ಪ್ರದೇಶವಾಗಿದೆ. 1963ರಲ್ಲಿ ಸಹಿ ಹಾಕಲಾದ ಚೀನಾ-ಪಾಕಿಸ್ತಾನ 'ಗಡಿ ಒಪ್ಪಂದ' ವನ್ನು ಭಾರತ ಎಂದೂ ಒಪ್ಪಿಕೊಂಡಿಲ್ಲ. ಒಪ್ಪಂದವು ಕಾನೂನುಬಾಹಿರ ಮತ್ತು ಅಸಿಂಧುವಾಗಿದೆ ಎಂದು ನಾವು ಸದಾ ಸಮರ್ಥಿಸಿಕೊಂಡಿದ್ದೇವೆ’ ಎಂದು ಜೈಸ್ವಾಲ್ ವಾರದ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
ಪಾಕಿಸ್ತಾನದ ಕಾನೂನುಬಾಹಿರ ಆಕ್ರಮಣದ ಅಡಿಯಲ್ಲಿ ಭಾರತೀಯ ಪ್ರದೇಶದ ಮೂಲಕ ಹಾದುಹೋಗುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್(ಸಿಪಿಇಸಿ) ಅನ್ನು ಭಾರತ ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
'ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗಗಳಾಗಿವೆ. ಈ ನಿಲುವನ್ನು ಪಾಕಿಸ್ತಾನ ಮತ್ತು ಚೀನಾ ಅಧಿಕಾರಿಗಳಿಗೆ ಹಲವಾರು ಸಂದರ್ಭಗಳಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ’ ಎಂದು ವಕ್ತಾರರು ಹೇಳಿದ್ದಾರೆ.
ಶಕ್ಸ್‌ಗಮ್ ಕಣಿವೆಯಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಯಾವುದೇ ಪ್ರಯತ್ನಗಳ ವಿರುದ್ಧ ಭಾರತವು ಚೀನಾಕ್ಕೆ ನಿರಂತರ ಪ್ರತಿಭಟನೆ ವ್ಯಕ್ತಪಡಿಸಿದೆ ಎಂದು ಜೈಸ್ವಾಲ್ ಹೇಳಿದ್ದಾರೆ. ನಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ನಾವು ಹೊಂದಿದ್ದೇವೆ ಎಂದೂ ಅವರು ಹೇಳಿದ್ದಾರೆ.
ತೈವಾನ್ ಬಳಿ ಚೀನಾದ ಮಿಲಿಟರಿ ತಾಲೀಮುಗಳಿಗೆ ಸಂಬಂಧಿಸಿದಂತೆ ಭಾರತವು ಇಂಡೊ-ಪೆಸಿಫಿಕ್ ಪ್ರದೇಶದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಜೈಸ್ವಾಲ್ ಹೇಳಿದ್ದಾರೆ.
‘ಸಂಯಮ ವಹಿಸುವಂತೆ, ಏಕಪಕ್ಷೀಯ ಕ್ರಮ ಕೈಗೊಳ್ಳದಂತೆ ಮತ್ತು ಬೆದರಿಕೆ ಅಥವಾ ಬಲಪ್ರಯೋಗವಿಲ್ಲದೆ ಶಾಂತಿಯುತ ವಿಧಾನಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಈ ಪ್ರದೇಶದ ಎಲ್ಲ ದೇಶಗಳನ್ನು ಒತ್ತಾಯಿಸುತ್ತೇವೆ’ಎಂದು ಅವರು ತಿಳಿಸಿದ್ದಾರೆ.