ADVERTISEMENT

Covid-19 India Update: 24,000 ಪ್ರಕರಣ; ಮಹಾರಾಷ್ಟ್ರ ಪಂಜಾಬ್‌ನಲ್ಲಿ ಕರ್ಫ್ಯೂ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 4:45 IST
Last Updated 13 ಮಾರ್ಚ್ 2021, 4:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಕಳೆದ 24 ಗಂಟೆಗಳಲ್ಲಿ 24,882 ಹೊಸ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, 140 ಸೋಂಕಿತರು ಮೃತಪಟ್ಟಿದ್ದಾರೆಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ದೇಶದಲ್ಲಿ ಈ ವರೆಗೆ ಒಟ್ಟು 1,13,33,728 ಪ್ರಕರಣಗಳು ಬೆಳಕಿಗೆ ಬಂದಿದ್ದು, 1,58,446 ಮಂದಿ ಸಾವಿಗೀಡಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 19,957 ಸೋಂಕಿತರು ಚೇತರಿಸಿಕೊಂಡಿದ್ದು, ಈ ವರೆಗೆ ಗುಣಮುಖರಾದವರ ಸಂಖ್ಯೆ 1,09,73,260ಕ್ಕೆ ತಲುಪಿದೆ. 2,02,022 ಸಕ್ರಿಯ ಪ್ರಕರಣಗಳಿವೆ.

ಮಹಾರಾಷ್ಟ್ರ, ಕೇರಳ, ಪಂಜಾಬ್‌, ಕರ್ನಾಟಕ, ಗುಜರಾತ್‌ ಹಾಗೂ ತಮಿಳುನಾಡನಲ್ಲಿ ಕೊರೊನಾ ವೈರಸ್‌ ಸೊಂಕು ಪ್ರಕರಣಗಳು ಹೆಚ್ಚುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.

ADVERTISEMENT

ಕೋವಿಡ್‌ ಪ್ರಕರಣಗಳ ಕೇಂದ್ರಬಿಂದುವೆಂದೇ ಪರಿಗಣಿಸಲ್ಪಟ್ಟಿರುವ ಮಹಾರಾಷ್ಟ್ರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ. ಮಹಾರಾಷ್ಟ್ರದಲ್ಲಿ 24 ಗಂಟೆಗಳಲ್ಲಿ ಕೋವಿಡ್‌–19 ದೃಢಪಟ್ಟ 14,000 ಪ್ರಕರಣಗಳು ದಾಖಲಾಗಿವೆ, ಇದು ಈ ವರ್ಷ ವರದಿಯಾಗಿರುವ ಅತಿ ಹೆಚ್ಚು ಪ್ರಕರಣಗಳ ದಾಖಲೆಯನ್ನು ಹಿಂದಿಟ್ಟಿದೆ.

ನಾಗ್ಪುರ, ಠಾಣೆ, ನಾಸಿಕ್‌, ಔರಂಗಬಾದ್‌, ಜಾಲ್ಗಾನ್‌, ಪರ್ಭಾನಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೋವಿಡ್‌ ನಿಯಂತ್ರಕ್ಕೆ ನಿರ್ಬಂಧಗಳನ್ನು ಹೇರಿವೆ. ಪುಣೆಯಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ ಹಾಗೂ ಹೊಟೇಲ್‌, ರೆಸ್ಟೋರೆಂಟ್‌ಗಳ ಸಮಯ ಕಡಿತಗೊಳಿಸಲಾಗಿದೆ. ಮಾರ್ಚ್‌ 15ರಿಂದ ನಾಗ್ಫುರದಲ್ಲಿ ಲಾಕ್‌ಡೌನ್‌ ಜಾರಿ ಮಾಡಲಾಗುತ್ತಿದೆ.

ಪಂಜಾಬ್‌ನಲ್ಲಿ ಮತ್ತೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 8 ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಿ, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಶುಕ್ರವಾರ 1,318 ಹೊಸ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪಂಜಾಬ್‌ ಸರ್ಕಾರ ಈ ಕ್ರಮಕೈಗೊಂಡಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,94,753ಕ್ಕೆ ಏರಿಕೆಯಾಗಿದ್ದರೆ, ಸಾವಿನ ಸಂಖ್ಯೆ 6,030ಕ್ಕೆ ಏರಿದೆ.

ಲೂಧಿಯಾನ, ಪಟಿಯಾಲ, ಮೊಹಾಲಿ, ಫತೇಘರ್ ಸಾಹಿಬ್, ಜಲಂಧರ್ ಸೇರಿದಂತೆ 8 ಜಿಲ್ಲೆಗಳಲ್ಲಿ ರಾತ್ರಿ 11 ರಿಂದ ಬೆಳಗ್ಗೆ 5 ರವರೆಗೆ ಕರ್ಫ್ಯೂ ವಿಧಿಸಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ರಾಜ್ಯ ಶಿಕ್ಷಣ ಸಚಿವ ವಿಜಯ್ ಸಿಂಗ್ಲಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.