ನವದೆಹಲಿ: ರಕ್ಷಣಾ ವಲಯಕ್ಕೆ ಪಾಕಿಸ್ತಾನವು ವಾರ್ಷಿಕವಾಗಿ ವೆಚ್ಚ ಮಾಡುವುದಕ್ಕಿಂತಲೂ 9 ಪಟ್ಟು ಅಧಿಕ ವೆಚ್ಚವನ್ನು ಭಾರತವು ಮಾಡುತ್ತಿದೆ. ಸ್ವೀಡನ್‌ನ ಚಿಂತಕರ ಛಾವಡಿ ‘ಸ್ಟಾಕ್‌ಹೋಮ್ ಇಂಟನ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಎಸ್‌ಐಪಿಆರ್‌ಐ) ತನ್ನ 2024ನೇ ಆವೃತ್ತಿಯ ವರದಿ ಬಿಡುಗಡೆ ಮಾಡಿದೆ. ಪೆಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ ನಂತರ ಎರಡೂ ದೇಶಗಳ ಮಧ್ಯೆ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಇದೇ ಹೊತ್ತಿನಲ್ಲಿ ಈ ವರದಿ ಬಿಡುಗಡೆಯಾಗಿದೆ. ವಿಶ್ವದ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತವು ಐದನೇ ಸ್ಥಾನದಲ್ಲಿದೆ.
ಭಾರತದ ವೆಚ್ಚವು 2023ರಲ್ಲಿ 83.6 ಬಿಲಿಯನ್ ಡಾಲರ್‌ನಷ್ಟಿತ್ತು (ಸುಮಾರು ₹7.11 ಲಕ್ಷ ಕೋಟಿ). 2024ರಲ್ಲಿ ಭಾರತವು ತನ್ನ ವೆಚ್ಚವನ್ನು 86.1 ಬಿಲಿಯನ್ ಡಾಲರ್‌ನಷ್ಟು (ಸುಮಾರು ₹7.33 ಲಕ್ಷ ಕೋಟಿ) ಹೆಚ್ಚಿಸಿಕೊಂಡಿದೆ. ಆದರೂ, 2023ಕ್ಕೆ ಹೋಲಿಸಿದರೆ ಭಾರತವು ಒಂದು ಸ್ಥಾನ ಕುಸಿದಿದೆ. ಇತರೆ ದೇಶಗಳು ವೆಚ್ಚ ಮಾಡುವ ಸರಾಸರಿ ವೆಚ್ಚಕ್ಕೆ ಹೋಲಿಸಿಕೊಂಡರೆ, ಭಾರತ ಮಾಡುವ ವೆಚ್ಚವು ಕಡಿಮೆಯಾಗಿದೆ.
ವಿಶ್ವದಲ್ಲಿಯೇ ಅತಿ ಹೆಚ್ಚು ಶಸ್ತ್ರಾಸ್ತ್ರ ಖರೀದಿ ಮಾಡುವ ದೇಶ ಭಾರತ. ಆದರೆ, ಭಾರತವು ತನ್ನ ನೀತಿ ಬದಲಿಸಿಕೊಳ್ಳುವ ಹಾದಿಯಲ್ಲಿದೆ. ಇದಕ್ಕಾಗಿ ನೀತಿಯನ್ನು ರೂಪಿಸಿಕೊಂಡಿದೆ. ರಕ್ಷಣಾ ವಲಯಕ್ಕೆ ತಾನು ಮಾಡುವ ಒಟ್ಟು ವೆಚ್ಚದ ಶೇ 22ರಷ್ಟು ಪ್ರಮಾಣವನ್ನು ದೇಶೀಯ ಕಂಪನಿಗಳಿಂದಲೇ ಖರೀದಿಸಲು ಭಾರತ ನೀತಿ ರೂಪಿಸಿಕೊಂಡಿದೆ. ಇದರಿಂದಾಗಿ ಸೇನಾ ವಾಹನಗಳು, ಹೆಲಿಕಾಪ್ಟರ್‌ಗಳು, ಜಲಾಂತರ್ಗಾಮಿ ನೌಕೆಗಳನ್ನು ಭಾರತವು ತಾನೇ ತಯಾರಿಸಿಕೊಳ್ಳುತ್ತಿದೆ. ಆದರೂ, ಕೆಲವು ಅತ್ಯಾಧುನಿಕ ಸೇನಾ ವ್ಯವಸ್ಥೆಗಳನ್ನು, ಯುದ್ಧವಿಮಾನಗಳನ್ನು ಆಮದು ಮಾಡಿಕೊಳ್ಳುತ್ತಿದೆ.
ಆಧಾರ: ಎಸ್‌ಐಪಿಆರ್‌ಐ ವರದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.