ADVERTISEMENT

ವ್ಯವಹಾರ ಕುದುರಿಸಲು ಲಂಚ: 82ನೇ ಸ್ಥಾನದಲ್ಲಿ ಭಾರತ

ಕಳೆದ ವರ್ಷಕ್ಕೆ ಹೋಲಿಸಿದರೆ ಮತ್ತೂ ಐದು ಸ್ಥಾನ ಕುಸಿತ

ಪಿಟಿಐ
Published 17 ನವೆಂಬರ್ 2021, 9:19 IST
Last Updated 17 ನವೆಂಬರ್ 2021, 9:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವ್ಯವಹಾರ ಕುದುರಿಸಲು ಲಂಚ ಪಡೆಯುವ ದೇಶಗಳ ಜಾಗತಿಕ ಪಟ್ಟಿಯಲ್ಲಿ ಭಾರತವು ಈ ವರ್ಷ 82ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಕಳೆದ ವರ್ಷ 77ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ ಮತ್ತೂ ಐದು ಸ್ಥಾನಗಳ ಕುಸಿತ ಕಂಡಿದೆ.

ಲಂಚ ನಿಗ್ರಹ ಗುಣಮಟ್ಟ ನಿಗದಿಪಡಿಸುವ ಸಂಸ್ಥೆ ‘ಟ್ರೇಸ್‌’, 194 ದೇಶಗಳು, ಸ್ವಾಯತ್ತ, ಅರೆ ಸ್ವಾಯತ್ತ ಪ್ರದೇಶಗಳಲ್ಲಿ ವ್ಯವಹಾರ ಕುದುರಿಸಲು ಕೊಡಬೇಕಿರುವ ಲಂಚದ ಕುರಿತು ವಿವಿಧ ಮಾನದಂಡಗಳ ಮೂಲಕ ಅಳೆದು ಶ್ರೇಯಾಂಕ ನಿಗದಿಪಡಿಸುತ್ತದೆ.

ಪ್ರಸಕ್ತ ವರ್ಷದ ದತ್ತಾಂಶದ ಪ್ರಕಾರ ಉತ್ತರ ಕೊರಿಯಾ, ತುರ್ಕಮೆನಿಸ್ತಾನ್‌, ವೆನಿಜುವೆಲಾ, ಎರಿಟ್ರಿಯಾ ದೇಶಗಳಲ್ಲಿ ಅತಿ ಹೆಚ್ಚು ವ್ಯವಹಾರ ಕುದುರಿಸುವ ಲಂಚ ತಾಂಡವಾಡುತ್ತಿದ್ದರೆ, ಡೆನ್ಮಾರ್ಕ್‌, ನಾರ್ವೆ, ಫಿನ್ಲೆಂಡ್‌, ಸ್ವೀಡನ್‌, ನ್ಯೂಜಿಲೆಂಡ್‌ಗಳಲ್ಲಿ ಇದು ಕಡಿಮೆಯಿದೆ.

ADVERTISEMENT

2020ರಲ್ಲಿ ಭಾರತವು 45 ಅಂಕ ಗಳಿಸಿದ್ದರೆ, ಈ ವರ್ಷ 44 ಅಂಕಕ್ಕೆ ಕುಸಿದಿದೆ.

ಸರ್ಕಾರದ ಜತೆಗಿನ ವ್ಯವಹಾರ ಸಂವಹನಗಳು, ಲಂಚ ತಡೆ, ಸರ್ಕಾರ ಮತ್ತು ನಾಗರಿಕ ಸೇವೆಯಲ್ಲಿ ಪಾರದರ್ಶಕತೆ ಹಾಗೂ ಮಾಧ್ಯಮ ಪಾತ್ರವನ್ನು ಒಳಗೊಂಡಿರುವ ನಾಗರಿಕ ಸಮಾಜದ ಮೇಲ್ವಿಚಾರಣೆಯ ಸಾಮರ್ಥ್ಯವನ್ನು ಆಧರಿಸಿ ‘ಟ್ರೇಸ್‌’ ಸಂಸ್ಥೆಯು ಲಂಚ ಅಪಾಯದ ಅಂಕಗಳನ್ನು ನೀಡುತ್ತದೆ.

ಭಾರತವು ತನ್ನ ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಚೀನಾ, ನೇಪಾಳ ಮತ್ತು ಬಾಂಗ್ಲಾದೇಶಕ್ಕಿಂತ ಉತ್ತಮ ಸ್ಥಿತಿಯಲ್ಲಿದೆ. ಭೂತಾನ್ 62ನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಅಂಕಿಅಂಶಗಳು ತೋರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.