ADVERTISEMENT

ಕ್ಯೂಆರ್‌ಎಸ್‌ಎಎಂ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ಪಿಟಿಐ
Published 17 ನವೆಂಬರ್ 2020, 15:27 IST
Last Updated 17 ನವೆಂಬರ್ 2020, 15:27 IST
ಕ್ಯೂಆರ್‌ಎಸ್‌ಎಎಂ ವ್ಯವಸ್ಥೆಯ ಎರಡನೇ ಹಂತದ ಪರೀಕ್ಷೆ –ಪಿಟಿಐ ಚಿತ್ರ
ಕ್ಯೂಆರ್‌ಎಸ್‌ಎಎಂ ವ್ಯವಸ್ಥೆಯ ಎರಡನೇ ಹಂತದ ಪರೀಕ್ಷೆ –ಪಿಟಿಐ ಚಿತ್ರ   

ನವದೆಹಲಿ: ಒಡಿಶಾ ಕರಾವಳಿಯಲ್ಲಿರುವ ಚಂಡೀಪುರ ಉಡಾವಣಾ ಕೇಂದ್ರದಿಂದ ‘ಕ್ವಿಕ್‌ ರಿಯಾಕ್ಷನ್‌ ಸರ್ಫೇಸ್‌ ಟು ಏರ್‌ ಕ್ಷಿಪಣಿ’ ವ್ಯವಸ್ಥೆಯನ್ನು ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ.

ಆಕಾಶದಲ್ಲಿ ಹಾರಾಡುತ್ತಿದ್ದ ಗುರಿಯನ್ನು ಕ್ಷಿಪಣಿಯು ನಿಖರವಾಗಿ ತಲುಪಿ ಧ್ವಂಸಗೊಳಿಸಿದೆ. ಕಳೆದ ಐದು ದಿನಗಳಲ್ಲಿ ಕ್ಷಿಪಣಿಯ ಎರಡನೇ ಯಶಸ್ವಿ ಪರೀಕ್ಷಾರ್ಥ ಉಡಾವಣೆ ಇದಾಗಿದೆ ಎಂದು ಸಚಿವಾಲಯವು ತಿಳಿಸಿದೆ. ‘ವಿಮಾನದಂತೆ ಇರುವ ‘ಬನ್ಶೀ’ ಹೆಸರಿನ ಮಾನವರಹಿತ(ಯುಎವಿ) ಜೆಟ್‌ ಕ್ಷಿಪಣಿಯ ಗುರಿಯಾಗಿತ್ತು. ಮಧ್ಯಾಹ್ನ 3.42ಕ್ಕೆ ಕ್ಷಿಪಣಿಯನ್ನು ಉಡಾವಣೆಗೊಳಿಸಲಾಗಿತ್ತು. 30 ಕಿ.ಮೀ ವ್ಯಾಪ್ತಿಯಲ್ಲಿರುವ ಶತ್ರುರಾಷ್ಟ್ರಗಳ ಯುದ್ಧವಿಮಾನ, ಡ್ರೋನ್‌ ಅಥವಾ ಯುಎವಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಈ ಕ್ಷಿಪಣಿಗಿದೆ. ಈ ಯಶಸ್ವಿ ಪರೀಕ್ಷೆಯು ಕ್ಷಿಪಣಿಯ ಉತ್ಪಾದನೆಗೆ ಹಸಿರು ನಿಶಾನೆ ನೀಡಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಯಶಸ್ವಿ ಪರೀಕ್ಷೆ ಹಿನ್ನೆಲೆಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ)ಯನ್ನು ಅಭಿನಂದಿಸಿರುವ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ‘ಮೊದಲ ಪರೀಕ್ಷೆಯಲ್ಲಿ ರೇಡಾರ್‌ ಹಾಗೂ ಕ್ಷಿಪಣಿಯ ಸಾಮರ್ಥ್ಯವನ್ನು ಡಿಆರ್‌ಡಿಒ ಪ್ರದರ್ಶಿಸಿತ್ತು. ಇದೀಗ ಎರಡನೇ ಪರೀಕ್ಷೆಯು ಕ್ಷಿಪಣಿಯ ಸಿಡಿತಲೆ ಹಾಗೂ ಗುರಿಯನ್ನು ಗುರುತಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದೆ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.