ನವದೆಹಲಿ: ಹಳಿ ಆಧಾರಿತ ಮೊಬೈಲ್ ಲಾಂಚರ್ ವ್ಯವಸ್ಥೆಯಿಂದ 2,000 ಕಿ.ಮೀ. ದೂರ ಕ್ರಮಿಸಬಲ್ಲ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದ್ದು, ದೇಶದಾದ್ಯಂತ ಈ ಕ್ಷಿಪಣಿಯನ್ನು ನಿಯೋಜಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದೆ.
ಮುಂದಿನ ಪೀಳಿಗೆಯ ಕ್ಷಿಪಣಿಯನ್ನು ಪರೀಕ್ಷಿಸಿದ ಒಂದು ದಿನದ ನಂತರ ಗುರುವಾರ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರೈಲು ಜಾಲದ ಮೂಲಕ ಕ್ಷಿಪಣಿಯನ್ನು ಉಡಾಯಿಸುವ ಸಾಮರ್ಥ್ಯವನ್ನು ಹೊಂದಿರುವ ಆಯ್ದ ರಾಷ್ಟ್ರಗಳ ಗುಂಪಿಗೆ ಭಾರತ ಸೇರಿದೆ ಎಂದು ಹೇಳಿದರು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಕಾರ್ಯತಂತ್ರದ ಪಡೆಗಳ ಕಮಾಂಡ್ (ಎಸ್‌ಎಫ್‌ಸಿ) ಸಹಯೋಗದೊಂದಿಗೆ, ಬುಧವಾರ ಪೂರ್ಣ ಕಾರ್ಯಾಚರಣೆಯ ಸನ್ನಿವೇಶದಲ್ಲಿ ಮಧ್ಯಂತರ ಶ್ರೇಣಿಯ ಅಗ್ನಿ ಪ್ರೈಮ್ ಕ್ಷಿಪಣಿಯ ಯಶಸ್ವಿ ಉಡಾವಣೆಯನ್ನು ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಉಡಾವಣೆ ಮಾಡಿದ ಸ್ಥಳವನ್ನು ಅದು ಬಹಿರಂಗಪಡಿಸಿಲ್ಲ.
ವಿಶೇಷವಾಗಿ ವಿನ್ಯಾಸಗೊಳಿಸಲಾದ ಹಳಿ ಆಧಾರಿತ ಮೊಬೈಲ್ ಲಾಂಚರ್‌ನಿಂದ ಉಡಾಯಿಸಲಾದ ಮೊದಲನೆ ಕ್ಷಿಪಣಿ ಇದಾಗಿದ್ದು, ರೈಲು ಜಾಲದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ದೇಶದಾದ್ಯಂತ ಚಲನಶೀಲತೆಯನ್ನು ಹೊಂದಲು ಮತ್ತು ಕಡಿಮೆ ಪ್ರತಿಕ್ರಿಯೆ ಸಮಯದೊಳಗೆ ಉಡಾವಣೆ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಸಿಂಗ್ ಹೇಳಿದ್ದಾರೆ.
ಕ್ಷಿಪಣಿಯು ಅತ್ಯಾಧುನಿಕ ಸಂವಹನ ವ್ಯವಸ್ಥೆಗಳು ಮತ್ತು ರಕ್ಷಣಾ ಕಾರ್ಯವಿಧಾನಗಳನ್ನು ಒಳಗೊಂಡಂತೆ ಎಲ್ಲ ಸ್ವತಂತ್ರ ಉಡಾವಣಾ ವೈಶಿಷ್ಟ್ಯಗನ್ನು ಹೊಂದಿದೆ ಎಂದು ಸಚಿವಾಲಯ ತಿಳಿಸಿದೆ.
ಕ್ಷಿಪಣಿ ಪಥವನ್ನು ವಿವಿಧ ಭೂ ಕೇಂದ್ರಗಳ ಮೂಲಕ ಟ್ರ್ಯಾಕ್ ಮಾಡಲಾಯಿತು. ಇದು ಮಿಷನ್‌ನ ಎಲ್ಲ ಉದ್ದೇಶಗಳನ್ನು ಪೂರೈಸಿದೆ ಎಂದು ಅದು ಹೇಳಿದೆ.
ಡಿಆರ್‌ಡಿಒನ ಹಿರಿಯ ವಿಜ್ಞಾನಿಗಳು ಮತ್ತು ಕಾರ್ಯತಂತ್ರದ ಪಡೆಗಳ ಕಮಾಂಡ್‌ನ ಅಧಿಕಾರಿಗಳು ಉಡಾವಣೆಯನ್ನು ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.