ಮುಂಬೈನಲ್ಲಿ ನಡೆದ ಗುರುವಾರ ಮಾತುಕತೆ ವೇಳೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಹಸ್ತಲಾಘವ ಮಾಡಿದರು
–ಪಿಟಿಐ ಚಿತ್ರ
ಮುಂಬೈ: ಸೇನಾ ತರಬೇತಿಯಲ್ಲಿ ಸಹಕಾರ, ಸಶಸ್ತ್ರ ಪಡೆಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿ, ಕಡಲ ವಿದ್ಯುತ್ ವ್ಯವಸ್ಥೆಗಳ ಅಭಿವೃದ್ಧಿ, ವಾಯು ರಕ್ಷಣಾ ವ್ಯವಸ್ಥೆ ಬಲಪಡಿಸುವಿಕೆ, ಗಡಿ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದೂ ಸೇರಿದಂತೆ ರಕ್ಷಣಾ ಮತ್ತು ಭದ್ರತಾ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಭಾರತ ಮತ್ತು ಬ್ರಿಟನ್ ನಡುವೆ ಗುರುವಾರ ಮಾತುಕತೆ ನಡೆಯಿತು.
ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ನೇತೃತ್ವದ ನಿಯೋಗ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ನಿಯೋಗದ ಸದಸ್ಯರ ನಡುವೆ ಇಲ್ಲಿನ ರಾಜಭವನದಲ್ಲಿ ಗುರುವಾರ ವಿವಿಧ ಕ್ಷೇತ್ರಗಳ ಸಂಬಂಧ ವೃದ್ಧಿ ಕುರಿತು ಪರಸ್ಪರ ಚರ್ಚೆ ನಡೆಯಿತು.
ಅಲ್ಲದೆ, ಜುಲೈನಲ್ಲಿ ಉಭಯ ದೇಶಗಳ ನಡುವೆ ನಡೆದ ಮುಕ್ತ ವ್ಯಾಪಾರ ಒಪ್ಪಂದ ಅಥವಾ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವನ್ನು (ಸಿಇಟಿಎ) ಇನ್ನಷ್ಟು ಎತ್ತರಕ್ಕೆ ಒಯ್ಯುವ ನಿಟ್ಟಿನಲ್ಲಿ ಸಂವಾದ ನಡೆಯಿತು. ಅಲ್ಲದೆ ಜಂಟಿ ಆರ್ಥಿಕ ಮತ್ತು ವ್ಯಾಪಾರ ಸಮಿತಿಯನ್ನು (ಜೆಇಟಿಸಿಒ) ಮರುಸ್ಥಾಪಿಸುವ ನಿಯಮಗಳಿಗೆ ಸಹಿ ಹಾಕಲಾಯಿತು.
ರಾಜಭವನದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಗಳ ಜತೆಗೆ ಮೋದಿ ಮತ್ತು ಸ್ಟಾರ್ಮರ್ ಅವರು ಭಾರತ–ಬ್ರಿಟನ್ ಸಿಇಒ ವೇದಿಕೆ ಮತ್ತು ಗ್ಲೋಬಲ್ ಫಿನ್‌ಟೆಕ್ ಉತ್ಸವದಲ್ಲೂ ಜಂಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಮೋದಿ ಅವರ ಜತೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಭಾಗವಹಿಸಿದ್ದರು. ಸ್ಟಾರ್ಮರ್ ಅವರ ಜತೆಗೆ ವ್ಯವಹಾರ ಮತ್ತು ವ್ಯಾಪಾರ ಕಾರ್ಯದರ್ಶಿ ಪೀಟರ್ ಕೈಲ್, ಹೂಡಿಕೆ ಸಚಿವ ಜೇಸನ್ ಸ್ಟಾಕ್‌ವುಡ್ ಹಾಜರಿದ್ದರು.
ಉಭಯ ದೇಶಗಳ ಸಶಸ್ತ್ರ ಪಡೆಗಳ ನಡುವಿನ ಜಂಟಿ ಸಮರಾಭ್ಯಾಸ, ತರಬೇತಿ ಮತ್ತು ಸಾಮರ್ಥ್ಯ ಹೆಚ್ಚಿಸುವ ಕುರಿತು ಎರಡೂ ನಾಯಕರು ಸಮ್ಮತಿ ಸೂಚಿಸಿದರು. ‘ನಮ್ಮ ನಡುವಿನ ರಕ್ಷಣಾ ಸಹಕಾರ ಆಳವಾಗಿದೆ. ರಕ್ಷಣಾ ಸಲಕರಣೆಗಳ ಸಹ ಉತ್ಪಾದನೆಯ ಜತೆಗೆ ರಕ್ಷಣಾ ಕೈಗಾರಿಕೆಗಳನ್ನು ಸಂಪರ್ಕಿಸುವತ್ತ ಮುಂದೆ ಸಾಗುತ್ತಿದ್ದೇವೆ’ ಎಂದು ಮೋದಿ ವಿವರಿಸಿದರು.
ಇಂಡೊ–ಪೆಸಿಫಿಕ್‌ನಲ್ಲಿ ಕಡಲ ಭದ್ರತಾ ಸಹಯೋಗ ವೃದ್ಧಿಸಲು ಎರಡೂ ದೇಶಗಳ ನಾಯಕರು ಬದ್ಧತೆ ವ್ಯಕ್ತಪಡಿಸಿದರು. ಜತೆಗೆ ಪ್ರಾದೇಶಿಕ ಕಡಲ ಭದ್ರತಾ ಕೇಂದ್ರ ಸ್ಥಾಪನೆಗೂ ಸಮ್ಮತಿಸಿದರು.
ತರಬೇತಿ ಮತ್ತು ಶಿಕ್ಷಣ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ಏರ್ಪಟ್ಟ ಒಪ್ಪಂದದಿಂದಾಗಿ ಭಾರತೀಯ ವಾಯುಪಡೆಯವರಿಗೆ ಬ್ರಿಟನ್‌ನ ರಾಯಲ್ ಏರ್‌ಫೋರ್ಸ್‌ನಲ್ಲಿ ತರಬೇತಿಯ ಅವಕಾಶ ದೊರೆಯಲಿದೆ. ಅಲ್ಲದೆ ಹಗುರ ಮತ್ತು ಬಹುಪಾತ್ರ ಕ್ಷಿಪಣಿ ವ್ಯವಸ್ಥೆಗಳ ಪೂರೈಕೆ ಮುಂದುವರಿಸುವ ಕುರಿತು ಒಪ್ಪಂದವನ್ನು ಉಭಯ ನಾಯಕರು ಘೋಷಿಸಿದರು.
ಭಾರತೀಯ ನೌಕಾ ವೇದಿಕೆಗಳಿಗೆ ಕಡಲ ವಿದ್ಯುತ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಸಹಕಾರ ನೀಡುವ ಒಪ್ಪಂದವನ್ನು ಅಂತಿಮಗೊಳಿಸುವ ಕುರಿತು ಈ ವೇಳೆ ಚರ್ಚೆ ನಡೆಯಿತು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 2025ರ ಏಪ್ರಿಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕಠಿಣ ಪದಗಳಲ್ಲಿ ಖಂಡಿಸಿದರು.
ಜಾಗತಿಕವಾಗಿ ನಿಷೇಧಿಸಲಾದ ಭಯೋತ್ಪಾದಕರು, ಸಂಘಟನೆಗಳು ಮತ್ತು ಅವರ ಪ್ರಾಯೋಜಕರ ವಿರುದ್ಧ ನಿರ್ಣಾಯಕ ಮತ್ತು ಸಂಘಟಿತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಉಭಯ ನಾಯಕರು ಪ್ರತಿಪಾದಿಸಿದರು. ಅಲ್ಲದೆ ಈ ನಿಟ್ಟಿನಲ್ಲಿ ಸಹಕಾರವನ್ನು ಬಲಪಡಿಸಲು ಬದ್ಧತೆಯನ್ನೂ ವ್ಯಕ್ತಪಡಿಸಿದರು.
ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ, ವಿಶ್ವಸಂಸ್ಥೆಯ ಚಾರ್ಟರ್ ಹಾಗೂ ಅಂತರರಾಷ್ಟ್ರೀಯ ಕಾನೂನಿಗೆ ತಕ್ಕಂತೆ ಸಮಗ್ರ ಮತ್ತು ನಿರಂತರವಾಗಿ ಭಯೋತ್ಪಾದನೆಯನ್ನು ಎದುರಿಸಲು ಅಂತರರಾಷ್ಟ್ರೀಯ ಪ್ರಯತ್ನಗಳನ್ನು ಸಂಘಟಿಸಬೇಕು ಎಂದೂ ಕರೆ ನೀಡಿದರು.
ಮುಂಬೈ: ಬ್ರಿಟನ್‌ನ ಪ್ರತಿಷ್ಠಿತ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯವು ಬೆಂಗಳೂರಿನಲ್ಲಿ ತನ್ನ ಕ್ಯಾಂಪಸ್ ತೆರೆಯಲಿದೆ. ಭಾರತ ಮತ್ತು ಬ್ರಿಟನ್ ನಡುವೆ ಶೈಕ್ಷಣಿಕ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ಈ ಐತಿಹಾಸಿಕ ನಿರ್ಧಾರ ಹೊರಬಿದ್ದಿದೆ. ಇದೇ ಹಾದಿಯಲ್ಲಿ ಬ್ರಿಟನ್‌ನ ಒಂಬತ್ತು ವಿಶ್ವವಿದ್ಯಾಲಯಗಳು ಭಾರತದ ವಿವಿಧೆಡೆ ತಮ್ಮ ಕ್ಯಾಂಪಸ್‌ಗಳನ್ನು ತೆರೆಯಲಿದ್ದು ಶೈಕ್ಷಣಿಕ ಸಂಶೋಧನೆ ಮತ್ತು ನಾವಿನ್ಯತೆಗೆ ಪ್ರೋತ್ಸಾಹ ನೀಡಲಿವೆ. ಭಾರತ ಪ್ರವಾಸದಲ್ಲಿರುವ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ನಿಯೋಗದ ನಡುವೆ ನಡೆದ ಮಾತುಕತೆಯ ಬಳಿಕ ಈ ನಿರ್ಧಾರ ಪ್ರಕಟವಾಗಿದೆ. ‘ಬ್ರಿಟನ್‌ನ ವಿವಿಧ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಕ್ಯಾಂಪಸ್‌ಗಳನ್ನು ತೆರೆಯಲು ನಿರ್ಧರಿಸಿರುವುದು ತುಂಬಾ ಸಂತೋಷದ ವಿಷಯವಾಗಿದೆ’ ಎಂದು ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವಕ್ಕಾಗಿ ಭಾರತದ ಕಾನೂನುಬದ್ಧ ಬೇಡಿಕೆಗಳಿಗೆ ಬ್ರಿಟನ್ ಬೆಂಬಲ ನೀಡುತ್ತದೆ ಎಂದು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ತಿಳಿಸಿದರು. ‘ಭಾರತವು ಜಾಗತಿಕ ಪಾಲುದಾರ ದೇಶ. ಕಾಮನ್‌ವೆಲ್ತ್ ಜಿ–20ಯಲ್ಲಿ ನಾವು ಒಟ್ಟಿಗೆ ಕುಳಿತುಕೊಳ್ಳುತ್ತೇವೆ. ಅದೇ ರೀತಿ ಭದ್ರತಾ ಮಂಡಳಿಯಲ್ಲೂ ಭಾರತ ತನ್ನ ಸರಿಯಾದ ಸ್ಥಾನ ಪಡೆಯುವುದನ್ನು ನೋಡಲು ಬಯಸುತ್ತೇವೆ’ ಎಂದು ಹೇಳಿದರು.
ಮುಂಬೈ: ಬಾರತವು ಬ್ರಿಟನ್ ನಡುವೆ ಈಗಿರುವ ₹4.97 ಲಕ್ಷ ಕೋಟಿ (56 ಬಿಲಿಯನ್ ಡಾಲರ್) ಮೊತ್ತದ ವ್ಯಾಪಾರವನ್ನು 2030ರ ವೇಳೆಗೆ ದ್ವಿಗುಣಗೊಳಿಸುವ ಯೋಜನೆ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಘೋಷಿಸಿದರು. ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ಜತೆಗಿನ ವ್ಯಾಪಾರ ಮಾತುಕತೆಗಳ ಬಳಿಕ ಅವರು ಈ ಮಾಹಿತಿ ನೀಡಿದರು. ಈ ಮೂಲಕ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಉಲ್ಲೇಖಿಸಿದೇ ಟೀಕಿಸಿದರು. ಟ್ರಂಪ್ ಅವರು ಇತ್ತೀಚೆಗೆ ಭಾರತದ್ದು ‘ಸತ್ತ ಆರ್ಥಿಕತೆ’ ಎಂದು ಜರಿದಿದ್ದರು. ‘ಭಾರತ– ಬ್ರಿಟನ್ ದ್ವಿಪಕ್ಷೀಯ ಸಂಬಂಧ ಈಗ ಇನ್ನಷ್ಟು ವೃದ್ಧಿಯಾಗಿದೆ. ವ್ಯಾಪಾರ ಒಪ್ಪಂದಗಳ ಪರಿಣಾಮ ನಮ್ಮ ಈ ಗುರಿ 2030ಕ್ಕೂ ಮೊದಲೇ ಸಾಧಿಸಬಹುದು ಎಂಬ ವಿಶ್ವಾಸವಿದೆ’ ಎಂದು ಅವರು ಹೇಳಿದರು. ಭಾರತ– ಬ್ರಿಟನ್ ಸಿಇಒ ವೇದಿಕೆ ಮತ್ತು ‘ಗ್ಲೋಬಲ್ ಫಿನ್‌ಟೆಕ್’ ಉತ್ಸವದಲ್ಲಿ ಮಾತನಾಡಿದ ಅವರು ಡಿಜಿಟಲ್ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಭಾರತವು ಇತರ ದೇಶಗಳಿಗೆ ಹೇಗೆಲ್ಲ ಸಹಾಯ ಮಾಡುತ್ತಿದೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.