ADVERTISEMENT

ಖರ್ಗೆ ಪುಸ್ತಕ ಬಿಡುಗಡೆಯಲ್ಲಿ ‘ಇಂಡಿಯಾ’ ಒಗ್ಗಟ್ಟಿನ ಮಂತ್ರ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 16:05 IST
Last Updated 29 ನವೆಂಬರ್ 2023, 16:05 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ 50 ವರ್ಷಗಳ ‘ಚುನಾವಣಾ ರಾಜಕಾರಣದ ಜೀವನಗಾಥೆ’ ಕೃತಿಯನ್ನು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಬುಧವಾರ ಇಲ್ಲಿ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಸೋನಿಯಾ, ‘ಖರ್ಗೆ ಅವರು ಯಾವಾಗಲೂ ತಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷಕ್ಕಾಗಿ ಹಾಗೂ ಪಕ್ಷದ ಸಂಘಟನೆ ಬಲಪಡಿಸಲು ಮೊದಲ ಆದ್ಯತೆ ನೀಡಿದ್ದಾರೆ. ದೇಶ ಇಂದು ಬಿಕ್ಕಟ್ಟಿನಲ್ಲಿದೆ. ಸ್ವಾತಂತ್ರ್ಯ ನಂತರ ಸ್ಥಾಪನೆಯಾದ ಎಲ್ಲ ಸಂಸ್ಥೆಗಳನ್ನು ಮುಚ್ಚಲು ಈಗಿನ ಸರ್ಕಾರ ಮುಂದಾಗಿದೆ. ಭಾರತದ ಆತ್ಮಕ್ಕಾಗಿ ನಡೆಯುವ ಐತಿಹಾಸಿಕ ಯುದ್ಧದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಲು ಖರ್ಗೆ ಅವರೇ ಅತ್ಯುತ್ತಮ ನಾಯಕರು’ ಎಂದು ಹೇಳಿದರು.

ಡಿಎಂಕೆಯ ಟಿ.ಆರ್. ಬಾಲು, ಸಿಪಿಐ (ಎಂ) ನಾಯಕ ಸೀತಾರಾಮ ಯೆಚೂರಿ ಮತ್ತು ಆರ್‌ಜೆಡಿ ಸಂಸದ ಮನೋಜ್ ಕುಮಾರ್ ಝಾ ಅವರು ಖರ್ಗೆ ಅವರ ನಾಯಕತ್ವ ಗುಣವನ್ನು ಶ್ಲಾಘಿಸಿದರು. ವಿರೋಧ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಮುನ್ನಡೆಯಬೇಕು ಎಂದೂ ಕಿವಿಮಾತು ಹೇಳಿದರು. 

ADVERTISEMENT

‘ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನಗಳು ನಡೆಯುತ್ತಿದ್ದು, ತಮ್ಮ ಭಿನ್ನಾಭಿಪ್ರಾಯಗಳನ್ನು ದೂರವಿಟ್ಟು ಅವರನ್ನು ಒಟ್ಟಾಗಿ ಮುನ್ನಡೆಸುವ ದೊಡ್ಡ ಜವಾಬ್ದಾರಿ ಖರ್ಗೆ ಅವರ ಮೇಲಿದೆ’ ಎಂದು ಯೆಚೂರಿ ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಮತದಾರರು ಮತ್ತು ಪಕ್ಷದ ಮುಖಂಡರು ನನ್ನ ಮೇಲೆ ತೋರಿದ ನಂಬಿಕೆಯಿಂದ ನನ್ನ ಕ್ಷೇತ್ರದ, ನನ್ನ ರಾಜ್ಯ ಮತ್ತು ನನ್ನ ದೇಶದ ಜನರಿಗೆ ಸೇವೆ ಸಲ್ಲಿಸಲು ಸಾಧ್ಯವಾಯಿತು. ಪ್ರಜಾಪ್ರಭುತ್ವ ಹಾಗೂ ಸಂವಿಧಾನದಿಂದಾಗಿ ನಾನು ಈ ಹಂತಕ್ಕೆ ತಲುಪಿದ್ದೇನೆ. ಆದರೆ, ಈಗ ಸಂವಿಧಾನವೇ ಅಪಾಯದಲ್ಲಿದೆ. ಈಗಿನ ಸರ್ಕಾರಕ್ಕೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ’ ಎಂದರು. 

ಸುಖದೇವ್‌ ಥೋರಟ್‌ ಹಾಗೂ ಚೇತನ್‌ ಶಿಂಧೆ ಸಂಪಾದಕತ್ವದ 'ಮಲ್ಲಿಕಾರ್ಜುನ ಖರ್ಗೆ: ಕರುಣೆ, ನ್ಯಾಯ ಮತ್ತು ಅಂತರ್ಗತ ಅಭಿವೃದ್ಧಿಯೊಂದಿಗೆ ರಾಜಕೀಯ ತೊಡಗುವಿಕೆ' ಕೃತಿಗೆ 75 ಮಂದಿ ಲೇಖನಗಳನ್ನು ಬರೆದಿದ್ದಾರೆ. ಸೋನಿಯಾ ಗಾಂಧಿ, ರಾಮನಾಥ್‌ ಕೋವಿಂದ್, ಮನಮೋಹನ್ ಸಿಂಗ್, ಎಂ.ವೆಂಕಯ್ಯ ನಾಯ್ಡು, ರಾಹುಲ್ ಗಾಂಧಿ, ಶರದ್ ಪವಾರ್, ನಿತಿನ್‌ ಗಡ್ಕರಿ, ಜ್ಯೋತಿರಾದಿತ್ಯ ಸಿಂಧಿಯಾ, ಎಸ್‌.ಎಂ.ಕೃಷ್ಣ ಮತ್ತಿತರ ನಾಯಕರ ಲೇಖನಗಳು ಕೃತಿಯಲ್ಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.