ನವದೆಹಲಿ: ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ (ಬಿಟಿಎ) ಸಂಬಂಧಿಸಿದಂತೆ ಭಾರತವು ಅಮೆರಿಕದೊಂದಿಗೆ ಮಾತುಕತೆ ನಡೆಸಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಮಂಗಳವಾರ ಇಲ್ಲಿ ತಿಳಿಸಿದರು.
‘ನಮ್ಮ ನಡುವೆ ಬಹಳಷ್ಟು ಮಾತುಕತೆ ನಡೆದಿದೆ. ಇನ್ನಷ್ಟು ಚರ್ಚೆ ನಡೆಯುತ್ತದೆನ್ನುವುದೂ ನಿಜ. ಆದರೂ ಅಮೆರಿಕದೊಂದಿಗೆ ಸಾಗುವ ಪ್ರಯತ್ನವನ್ನು ಮುಂದುವರಿಸಿದ್ದೇವೆ. ಈ ಕಾರಣಕ್ಕೇ ಬಿಟಿಎ ಕುರಿತ ಮಾತುಕತೆ ನಡೆಯಲಿದೆ’ ಎಂದು ಸುಸ್ಥಿರತೆಯ ಕುರಿತಂತೆ ‘ಇಂಡಸ್ಟ್ರಿ ಚೇಂಬರ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದರು.
ಭಾರತವೇ ಹತ್ತಿರ:
‘ಚೀನಾ, ರಷ್ಯಾಕ್ಕಿಂತಲೂ ಭಾರತವೇ ನಮಗೆ ಹತ್ತಿರವಾಗಿದೆ’ ಎಂದಿರುವ ಅಮೆರಿಕದ ಹಣಕಾಸು ಇಲಾಖೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ‘ಉಭಯ ದೇಶಗಳು ತಮ್ಮ ನಡುವಿನ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲಿವೆ’ ಎಂದು ‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಶೇ 50ರಷ್ಟು ಸುಂಕ ವಿಧಿಸಿದ ಬಳಿಕ ಭಾರತ–ಅಮೆರಿಕ ಸಂಬಂಧದ ಸ್ಥಿತಿಗತಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೆಸೆಂಟ್, ‘ರಷ್ಯಾದಿಂದ ತೈಲವನ್ನು ಖರೀದಿಸಿ ಅದನ್ನು ಮರು ಮಾರಾಟ ಮಾಡುವ ವಿಷಯದಲ್ಲಿ ಭಾರತ ಚತುರತೆಯನ್ನು ಹೊಂದಿಲ್ಲ’ ಎಂದರು.
ಮಾರ್ಚ್ ತಿಂಗಳಿನಿಂದಲೂ ಉಭಯ ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ನಡೆದಿದೆ. ಇದುವರೆಗೂ ಐದು ಸುತ್ತಿನ ಮಾತುಕತೆ ಪೂರ್ಣಗೊಂಡಿದೆ. ಅಮೆರಿಕವು ಶೇ 50ರಷ್ಟು ಸುಂಕವನ್ನು ವಿಧಿಸಿದ ನಂತರ ಆ. 25ರಿಂದ ನಿಗದಿಯಾಗಿದ್ದ ಮಾತುಕತೆಯನ್ನು ಮುಂದೂಡಲಾಗಿತ್ತು. ಇನ್ನೂ ಆರನೇ ಸುತ್ತಿನ ಮಾತುಕತೆಗೆ ಹೊಸ ದಿನಾಂಕ ನಿಗದಿಪಡಿಸಿಲ್ಲ.
8ರಂದು ಮಾತುಕತೆ:
‘ಭಾರತ– ಐರೋಪ್ಯ ಒಕ್ಕೂಟದ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ 13ನೇ ಸುತ್ತಿನ ಮಾತುಕತೆಯು ಸೆ. 8ರಿಂದ ನಡೆಯಲಿದ್ದು, ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ಸುನಿಲ್ ಬರ್ತ್ವಾಲ್ ಇದಕ್ಕಾಗಿಯೇ ಬ್ರಸೆಲ್ಸ್‌ನಲ್ಲಿದ್ದಾರೆ’ ಎಂದು ಪೀಯೂಷ್ ತಿಳಿಸಿದರು.
‘ಮಾತುಕತೆಗೆ ಸಂಬಂಧಿಸಿದಂತೆ ನಾವು ಸಕ್ರಿಯರಾಗಿದ್ದೇವೆ. ಮಹತ್ವದ ಪ್ರಗತಿಯನ್ನು ಸಾಧಿಸುತ್ತಿದ್ದೇವೆ’ ಎಂದಿದ್ದಾರೆ.
ಆಸ್ಟ್ರೇಲಿಯಾ, ಅರಬ್ ಸಂಯುಕ್ತ ಸಂಸ್ಥಾನ (ಯುಎಇ), ಮಾರಿಷಸ್, ಬ್ರಿಟನ್ ಹಾಗೂ ಇಎಫ್‌ಟಿಎ ಒಕ್ಕೂಟದಲ್ಲಿರುವ ನಾಲ್ಕು ಐರೋಪ್ಯ ರಾಷ್ಟ್ರಗಳೊಂದಿಗೆ ಭಾರತವು ಈಗಾಗಲೇ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ ಎಂದು ಕೇಂದ್ರ ಸಚಿವರು ಹೇಳಿದರು.
‘ಭಾರತ– ಚೀನಾ ಸಂಬಂಧ ಸಹಜ ಸ್ಥಿತಿಗೆ’
‘ಭಾರತ– ಚೀನಾ ನಡುವಿನ ಗಡಿ ಸಮಸ್ಯೆಯು ಪರಿಹಾರಗೊಳ್ಳಲು ಆರಂಭವಾಗುತ್ತಿದ್ದಂತೆ ಉಭಯ ದೇಶಗಳ ನಡುವಿನ ಉದ್ವಿಗ್ನತೆಯು ಶಮನಗೊಳ್ಳುತ್ತಿದೆ. ಸಂಬಂಧವೂ ಸಹಜ ಸ್ಥಿತಿಯತ್ತ ಸಾಗುತ್ತಿದೆ’ ಎಂದು ಕೇಂದ್ರ ಸಚಿವ ಪೀಯೂಷ್ ತಿಳಿಸಿದರು. ‘ಗಾಲ್ವನ್‌ನಲ್ಲಿ ನಮಗೆ ಸಮಸ್ಯೆಯಿತ್ತು. ಇದರಿಂದಾಗಿಯೇ ಚೀನಾದೊಟ್ಟಿಗಿನ ಸಂಬಂಧ ಹದಗೆಟ್ಟಿತ್ತು. ಗಡಿಯ ವಿವಾದ ತಣ್ಣಗಾಗುತ್ತಿದ್ದಂತೆ ಅಲ್ಲಿನ ಪರಿಸ್ಥಿತಿಯು ಸಾಮಾನ್ಯ ಸ್ಥಿತಿಗೆ ಮರಳುವುದು ಸಹಜ’ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ದ್ವಿಪಕ್ಷೀಯ ಮಾತುಕತೆ ನಡೆಸಿ ಗಡಿ ವಿವಾದ ಪರಿಹಾರಕ್ಕೆ ಸಮ್ಮತಿಸಿದ್ದರು. ವ್ಯಾಪಾರ ಒಪ್ಪಂದದ ಮಾತುಕತೆಯನ್ನು ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.