ADVERTISEMENT

ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತಾದ ಭಾರತ, ಅಮೆರಿಕ ಸಭೆ ಮುಂದೂಡಿಕೆ: ವರದಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 8:11 IST
Last Updated 22 ಫೆಬ್ರುವರಿ 2026, 8:11 IST
<div class="paragraphs"><p>ಭಾರತ-ಅಮೆರಿಕ</p></div>

ಭಾರತ-ಅಮೆರಿಕ

   

ನವದೆಹಲಿ: ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತಾದ ಅಂಶಗಳನ್ನು ಅಂತಿಮಗೊಳಿಸಲು ಸೋಮವಾರದಿಂದ ವಾಷಿಂಗ್ಟನ್‌ನಲ್ಲಿ ನಡೆಯಬೇಕಿದ್ದ ಮುಖ್ಯ ಸಮಾಲೋಚಕರ ಪ್ರಸ್ತಾವಿತ ಸಭೆಯನ್ನು ಮರು ನಿಗದಿಪಡಿಸಲು ಭಾರತ ಮತ್ತು ಅಮೆರಿಕ ನಿರ್ಧರಿಸಿವೆ ಎಂದು ಮೂಲಗಳು ಭಾನುವಾರ ತಿಳಿಸಿವೆ.

ಭಾರತೀಯ ತಂಡವು ಫೆಬ್ರುವರಿ 23ರಂದು ಅಮೆರಿಕದಲ್ಲಿ ಮೂರು ದಿನಗಳ ಸಭೆಯನ್ನು ಆರಂಭಿಸಬೇಕಿತ್ತು. ವಾಣಿಜ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ದರ್ಪಣ್ ಜೈನ್ ಈ ಒಪ್ಪಂದಕ್ಕೆ ಭಾರತದ ಮುಖ್ಯ ಸಮಾಲೋಚಕರಾಗಿದ್ದಾರೆ.

ADVERTISEMENT

ಟ್ರಂಪ್ ವಿವಿಧ ದೇಶಗಳ ಮೇಲೆ ವಿಧಿಸಿದ್ದ ಪ್ರತಿ ಸುಂಕವನ್ನು ಅಮೆರಿಕ ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದು, ಅದರ ಪರಿಣಾಮಗಳ ಕುರಿತ ಪರಾಮರ್ಶೆಗೆ ಉಭಯ ದೇಶಗಳ ತಂಡಗಳಿಗೂ ಸಮಯ ಬೇಕಿರುವುದರಿಂದ ಸಭೆ ಮುಂದೂಡಲಾಗಿದೆ. ಸಭೆಯನ್ನು ಪರಸ್ಪರ ಅನುಕೂಲಕರ ದಿನಾಂಕದಂದು ಮರು ನಿಗದಿಪಡಿಸಲಾಗುವುದು ಎಂದು ವಾಣಿಜ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ಆಮದು ಸುಂಕಗಳ ವಿರುದ್ಧ ಅಮೆರಿಕದ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ನಂತರ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ. ನ್ಯಾಯಾಲಯದ ತೀರ್ಪಿನ ನಂತರ ಫೆಬ್ರುವರಿ 24ರಿಂದ ಜಾರಿಗೆ ಬರುವಂತೆ ಭಾರತ ಸೇರಿದಂತೆ ಎಲ್ಲ ದೇಶಗಳ ಮೇಲೆ ಟ್ರಂಪ್ ಶುಕ್ರವಾರ ಶೇ 10 ರಷ್ಟು ಸುಂಕವನ್ನು ವಿಧಿಸಿದ್ದರು. ಬಳಿಕ, ಶನಿವಾರ ಇದನ್ನು ಶೇ 15ಕ್ಕೆ ಹೆಚ್ಚಿಸಿದ್ದಾರೆ.

2025ರ ಆಗಸ್ಟ್ ತಿಂಗಳಲ್ಲಿ ಭಾರತದ ಮೇಲೆ ಅಮೆರಿಕ ಶೇ 25ರಷ್ಟು ಪ್ರತಿ ಸುಂಕ ವಿಧಿಸಿತ್ತು. ನಂತರ, ರಷ್ಯಾದ ಕಚ್ಚಾ ತೈಲವನ್ನು ಖರೀದಿಸುತ್ತಿರುವ ಹಿನ್ನೆಲೆ ದಂಡದ ರೂಪದಲ್ಲಿ ಶೇ 25ರಷ್ಟು ಸುಂಕ ಸೇರಿ ಒಟ್ಟು ಸುಂಕವನ್ನು ಶೇ 50ಕ್ಕೆ ಹೆಚ್ಚಿಸಿತ್ತು.

ಈ ತಿಂಗಳ ಆರಂಭದಲ್ಲಿ ಭಾರತ ಮತ್ತು ಅಮೆರಿಕ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಒಂದು ಚೌಕಟ್ಟು ರೂಪಿಸಲಾಗಿದ್ದು, ಅದರ ಅಡಿಯಲ್ಲಿ ಅಮೆರಿಕವು ಭಾರತದ ಮೇಲಿನ ಆಮದು ಸುಂಕವನ್ನು ಶೇ 18 ಕ್ಕೆ ಇಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.