ಜಾವ್ಲಿನ್ ಕ್ಷಿಪಣಿ ವ್ಯವಸ್ಥೆ
ಎಕ್ಸ್ ಚಿತ್ರ
ನವದೆಹಲಿ: ಭಾರತೀಯ ರಕ್ಷಣಾ ಇಲಾಖೆಗೆ ಅಗತ್ಯವಿರುವ ಜಾವ್ಲಿನ್ ಕ್ಷಿಪಣಿ ವ್ಯವಸ್ಥೆ ಮತ್ತು ಎಕ್ಸ್‌ಕ್ಯಾಲಿಬರ್ ಸ್ಪೋಟಕಗಳನ್ನೂ ಒಳಗೊಂಡ ₹825 ಕೋಟಿ ಮೌಲ್ಯದ ರಕ್ಷಣಾ ಸಾಮಗ್ರಿಗಳ ಮಾರಾಟಕ್ಕೆ ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ (DSCA) ಒಪ್ಪಿಗೆ ನೀಡಿದೆ.
ಈ ಉದ್ದೇಶಿತ ವ್ಯಾಪಾರದಿಂದ ಭಾರತ ಹಾಗೂ ಅಮೆರಿಕದ ಕಾರ್ಯತಂತ್ರದ ಪಾಲುದಾರಿಕೆ ಸಂಬಂಧ ವಿದೇಶಿ ನೀತಿ ಮತ್ತು ಅಮೆರಿಕದ ರಾಷ್ಟ್ರೀಯ ಭದ್ರತೆಯ ಗುರಿಯನ್ನು ಬೆಂಬಲಿಸಲಿದೆ ಎಂದು ಡಿಎಸ್‌ಸಿಎ ಹೇಳಿದೆ.
ಮೊದಲ ಹಂತದಲ್ಲಿ ₹408 ಕೋಟಿ ಮೊತ್ತದ ರಕ್ಷಣಾ ಸಾಮಗ್ರಿಗಳನ್ನು ಅಮೆರಿಕವು ಭಾರತಕ್ಕೆ ನೀಡಲಿದೆ. ಇದರಲ್ಲಿ 148 ಜಾವ್ಲಿನ್ ಕ್ಷಿಪಣಿ, 25 ಜಾವ್ಲಿನ್ ಹಗುರ ಕಮಾಂಡ್ ಲಾಂಚ್ ಯೂನಿಟ್‌ಗಳು (ಜಾವ್ಲಿನ್ ಬ್ಲಾಕ್ 1 ಕಮಾಂಡ್ ಲಾಂಚ್ ಯೂನಿಟ್ (CLU)) ಒಳಗೊಂಡಿದೆ ಎಂದು ಡಿಎಸ್‌ಸಿಎ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಈ ವ್ಯಾಪಾರ ಒಪ್ಪಂದದಲ್ಲಿ ಪ್ರಮುಖವಲ್ಲದ ರಕ್ಷಣಾ ಉಪಕರಣಗಳನ್ನೂ ಅಮೆರಿಕವು ಭಾರತಕ್ಕೆ ನೀಡುತ್ತಿದೆ. ಅದರಲ್ಲಿ ಜಾವ್ಲಿನ್ ಸಿಎಲ್‌ಯು ಸಾಧಾರಣ ಕೌಶಲವುಳ್ಳ ತರಬೇತಿ ಉಪಕರಣ; ಕ್ಷಿಪಣಿಯಂತೆಯೇ ಅನುಕರಿಸುವ ಸಾಧನ; ಬ್ಯಾಟರಿ ಕೂಲೆಂಟ್ ಯೂನಿಟ್; ಸಂವಹನ ನಡೆಸುವ ಎಲೆಕ್ಟ್ರಾನಿಕ್ ಉಪಖರಣ; ಜಾವ್ಲಿನ್ ನಿರ್ವಹಣೆಯ ಮಾರ್ಗದರ್ಶಿ, ಲೈಫ್‌ಸೈಕಲ್ ನೆರವು; ವೈಯಕ್ತಿಕ ಭದ್ರತಾ ತಪಾಸಣೆ; ಪೂರಕ ಸಾಧನಗಳು; ಉಪಕರಣಗಳನ್ನು ಜೋಡಿಸುವುದು ಮತ್ತು ಅದಕ್ಕೆ ನೆರವಾಗುವುದು ಸೇರಿದಂತೆ ಹಲವು ಬಗೆಯ ನೆರವನ್ನು ಅಮೆರಿಕವು ಭಾರತಕ್ಕೆ ನೀಡುತ್ತಿದೆ.
ಎರಡನೇ ಹಂತದಲ್ಲಿ ₹416 ಕೋಟಿ ಮೊತ್ತದ ರಕ್ಷಣಾ ಸಾಮಗ್ರಿಗಳನ್ನು ಅಮೆರಿಕ ನೀಡುತ್ತಿದೆ. ಇದರಲ್ಲಿ 216 ಎಕ್ಸ್‌ಕ್ಯಾಲಿಬರ್ ಸಿಡಿಮದ್ದುಗಳನ್ನು ನೀಡುತ್ತಿದೆ.
ಈ ಸಾಧನಗಳ ಖರೀದಿಯ ಮೂಲಕ ಎಂಥದ್ದೇ ಅಪಾಯಗಳನ್ನು ಎದುರಿಸಲು ಭಾರತ ಸರ್ವ ಸನ್ನದ್ಧವಾಗಲಿದೆ. ಇದರಿಂದಾಗಿ ಇಂಡೊ ಪೆಸಿಫಿಕ್ ಮತ್ತು ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ರಾಜಕೀಯ ಸ್ಥಿರತೆ, ಶಾಂತಿ ಮತ್ತು ಆರ್ಥಿಕ ಪ್ರಗತಿ ಸಾಧ್ಯ ಎಂದು ಡಿಎಸ್‌ಸಿಎ ಹೇಳಿದೆ.
‘ಈ ರಕ್ಷಣಾ ಸಾಮಗ್ರಿಗಳ ಖರೀದಿ ಮೂಲಕ ಸದ್ಯದ ಹಾಗೂ ಭವಿಷ್ಯದ ಯಾವುದೇ ರಕ್ಷಣಾ ಅಪಾಯಗಳನ್ನು ಎದುರಿಸಲು ಭಾರತ ಸರ್ವ ಸನ್ನದ್ಧವಾಗಿರಲಿದೆ. ರಕ್ಷಣಾ ಇಲಾಖೆಗಳು ಈ ಸಾಧನಗಳನ್ನು ಬಹುಬೇಗ ತಮ್ಮ ದಳಗಳಲ್ಲಿ ಇವುಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.