ಅಮೆರಿಕ ಭಾರತ ಧ್ವಜ
ನವದೆಹಲಿ: ಭಾರತವು ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಪ್ರಯತ್ನಿಸುತ್ತಿದೆ ಎಂದು ವಾಣಿಜ್ಯ ಇಲಾಖೆಯ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಗುರುವಾರ ತಿಳಿಸಿದ್ದಾರೆ.
ಅಗರ್ವಾಲ್ ಅವರು, ಪ್ರಸ್ತಾವಿತ ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮುಖ್ಯ ಸಮಾಲೋಚಕರೂ ಆಗಿದ್ದಾರೆ.
ಈ ವರ್ಷದ ಸೆಪ್ಟೆಂಬರ್-ಅಕ್ಟೋಬರ್ ಒಳಗೆ ಒಪ್ಪಂದದ ಮೊದಲ ಹಂತವನ್ನು ಮುಕ್ತಾಯಗೊಳಿಸುವುದು ನಮ್ಮ ಗುರಿಯಾಗಿದೆ. ಅದಕ್ಕೂ ಮೊದಲು, ಎರಡೂ ದೇಶಗಳು ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಪ್ರಯತ್ನಿಸುತ್ತಿವೆ ಎಂದಿದ್ದಾರೆ.
ಭಾರತವು ಇಲ್ಲಿಯವರೆಗೆ 26 ದೇಶಗಳೊಂದಿಗೆ 14ಕ್ಕೂ ಹೆಚ್ಚು ಮುಕ್ತ ವ್ಯಾಪಾರ ಒಪ್ಪಂದಗಳನ್ನು (ಎಫ್‌ಟಿಎ) ಜಾರಿಗೆ ತಂದಿದೆ ಎಂದು ಅಗರ್ವಾಲ್ ಹೇಳಿದ್ದಾರೆ.
‘ಬ್ರಿಟನ್ ಜೊತೆ ಇತ್ತೀಚೆಗೆ ಒಪ್ಪಂದವನ್ನು ಅಂತಿಮಗೊಳಿಸಿದ್ದೇವೆ. ನಾವು ಯುರೋಪಿಯನ್ ಒಕ್ಕೂಟದೊಂದಿಗೆ ಮಾತುಕತೆಗಳನ್ನು ನಡೆಸುತ್ತಿದ್ದೇವೆ. ಇದೇವೇಳೆ, ಅಮೆರಿಕ ಜೊತೆ ಮಾತುಕತೆ ನಡೆಯುತ್ತಿದ್ದು, ಒಪ್ಪಂದವನ್ನು ಶೀಘ್ರ ಅಂತಿಮಗೊಳಿಸಲು ಪ್ರಯತ್ನಿಸುತ್ತಿದ್ದೇವೆ’ಎಂದು ಅವರು ರಫ್ತು ಲಾಜಿಸ್ಟಿಕ್ಸ್ ಕುರಿತ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಲ್ಯಾಟಿನ್ ಅಮೆರಿಕದ ದೇಶಗಳಾದ ಚಿಲಿ, ಪೆರು ಜೊತೆಗೂ ಮಾತುಕತೆ ನಡೆಯುತ್ತಿದೆ ಎಂದಿದ್ದಾರೆ.
ಆಸ್ಟ್ರೇಲಿಯಾ, ದುಬೈ ಜೊತೆ ವ್ಯಾಪಾರ ಒಪ್ಪಂದ ಆಗಿದೆ. ನ್ಯೂಜಿಲೆಂಡ್ ಜೊತೆ ಮಾತುಕತೆ ನಡೆಯುತ್ತಿದೆ. ವಿಶ್ವದ ಪ್ರಮುಖ ದೇಶಗಳು ಮತ್ತು ಬೃಹತ್ ಆರ್ಥಿಕತೆ ಇರುವ ದೇಶಗಳ ಜೊತೆ ವ್ಯಾಪಾರ ಒಪ್ಪಂದಕ್ಕೆ ಯತ್ನಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಅಮೆರಿಕ ಕಾಲಮಾನದ(ಜುಲೈ 9) ಒಪ್ಪಂದ ಅಂತಿಮಗೊಳಿಸಲು ಅಮೆರಿಕ ನೀಡಿದ್ದ ಗಡುವು ಇಂದು ಕೊನೆಗೊಳ್ಳುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.