ಸಚಿವ ಎಸ್. ಜೈಶಂಕರ್
ನವದೆಹಲಿ: ಸುಳ್ಳು ಮತ್ತು ಆಧಾರರಹಿತ ವರದಿಗಳ ಮೂಲಕ ಭಾರತ ಮತ್ತು ಅಫ್ಗಾನಿಸ್ತಾನದ ನಡುವೆ ಅಪನಂಬಿಕೆಯನ್ನು ಸೃಷ್ಟಿಸುವ ಪಾಕಿಸ್ತಾನದ ಪ್ರಯತ್ನಗಳಿಗೆ ಕಿವಿಗೊಡದಿದ್ದಕ್ಕೆ ಭಾರತ ಶ್ಲಾಘಿಸಿದೆ.
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಫ್ಗಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
ಇದೇ ವೇಳೆ ಪಹಲ್ಗಾಮ್ ದಾಳಿಯನ್ನು ಮುತ್ತಕಿ ಖಂಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿರುವ ಜೈಶಂಕರ್, ‘ಅಫ್ಗಾನಿಸ್ತಾನದ ವಿದೇಶಾಂಗ ಸಚಿವ ಮೌಲವಿ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ಉತ್ತಮ ಸಂಭಾಷಣೆ ನಡೆಯಿತು. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳು. ಅಫ್ಗಾನಿಸ್ತಾನದ ಜನರೊಂದಿಗೆ ನಮ್ಮ ಸಾಂಪ್ರದಾಯಿಕ ಸ್ನೇಹ ಮತ್ತು ಅವರ ಅಭಿವೃದ್ಧಿ ಅಗತ್ಯಗಳಿಗೆ ನಿರಂತರ ಬೆಂಬಲದ ಕುರಿತು ಮಾತುಕತೆ ನಡೆಸಲಾಯಿತು. ಉಭಯ ದೇಶಗಳ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯುವ ಮಾರ್ಗಗಳು ಮತ್ತು ವಿಧಾನಗಳ ಕುರಿತು ಚರ್ಚಿಸಲಾಯಿತು’ ಎಂದು ಬರೆದುಕೊಂಡಿದ್ದಾರೆ.
ಭಾರತ ಇನ್ನೂ ತಾಲಿಬಾನ್ ರಚನೆಯನ್ನು ಗುರುತಿಸಿಲ್ಲ, ಕಾಬೂಲ್‌ನಲ್ಲಿ ನಿಜವಾಗಿಯೂ ಎಲ್ಲರನ್ನೂ ಒಳಗೊಂಡ ಸರ್ಕಾರ ರಚನೆಗೆ ಶ್ರಮಿಸುತ್ತಿದೆ ಎಂದು ಅಫ್ಗಾನಿಸ್ತಾನ ಹೇಳಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ ಯಾವುದೇ ದೇಶದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಿಗೆ ಅಫ್ಗಾನಿಸ್ತಾನದ ಮಣ್ಣನ್ನು ಬಳಸಬಾರದು ಎಂದು ಒತ್ತಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.