ADVERTISEMENT

ಗಡಿರೇಖೆ ಸ್ಥಿತಿ ಬದಲಾವಣೆಗೆ ಅವಕಾಶ ನೀಡೆವು: ಜೈಶಂಕರ್

ಪಿಟಿಐ
Published 19 ಜೂನ್ 2022, 10:28 IST
Last Updated 19 ಜೂನ್ 2022, 10:28 IST
ಎಸ್.ಜೈಶಂಕರ್‌
ಎಸ್.ಜೈಶಂಕರ್‌   

ನವದೆಹಲಿ: ‘ಅಂತರರಾಷ್ಟ್ರೀಯ ಗಡಿರೇಖೆಯ ಸ್ವರೂಪವನ್ನು ಅಥವಾ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾವಣೆ ಮಾಡಲು ಚೀನಾಗೆ ಭಾರತ ಅವಕಾಶ ನೀಡುವುದಿಲ್ಲ’ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಭಾನುವಾರ ಹೇಳಿದರು.

ಪೂರ್ವ ಲಡಾಖ್‌ನಲ್ಲಿ ಚೀನಾದ ಯತ್ನವನ್ನು ಅಗಾಧ ಕಾರ್ಯತಂತ್ರದ ಪ್ರಯತ್ನದ ಮೂಲಕ ಚೀನಾಗೆ ಭಾರತ ಪ್ರತಿರೋಧ ಒಡ್ಡಿದೆ ಎಂದೂ ಸಿಎನ್ಎನ್‌–ನ್ಯೂಸ್18 ಏರ್ಪಡಿಸಿದ್ದ ಸಮಾವೇಶದಲ್ಲಿ ಅವರು ಪ್ರತಿಪಾದಿಸಿದರು.

‘ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಸೇನಾ ತುಕಡಿಗಳು ದಾಟಬಾರದು ಎಂಬ 1993 ಮತ್ತು 1996ರ ಒಪ್ಪಂದವನ್ನು ಚೀನಾ ಉಲ್ಲಂಘಿಸಿದೆ. ಗಡಿ ರೇಖೆಯ ಸ್ವರೂಪವನ್ನು ಬದಲಿಸಲೂ ಯತ್ನಿಸುತ್ತಿದೆ ಎಂದು ಆರೋಪಿಸಿದರು.

ADVERTISEMENT

ಕೋವಿಡ್ ಪರಿಸ್ಥಿತಿ ಇದ್ದರೂ ವ್ಯವಸ್ಥಿತ ಕಾರ್ಯತಂತ್ರದಿಂದಾಗಿ ಚೀನಾದ ಪ್ರತಿರೋಧವನ್ನು ಎದುರಿಸಲಾಗಿದೆ. ಆದರೆ, ಇದನ್ನು ಜನರು, ವಿಶ್ಲೇಷಕರು ಅಥವಾ ದೇಶದ ರಾಜಕಾರಣ ಗಮನಿಸಿಲ್ಲ ಎಂದು ಜೈಶಂಕರ್ ಹೇಳಿದರು.

ವಿವಾದಕ್ಕೆ ಸಂಬಂಧಿಸಿದಂತೆ ಗಡಿಯನ್ನು ಕೆಲವರು ತುಂಬಾ ಸರಳವಾಗಿ ಅರ್ಥಮಾಡಿಕೊಂಡಿದ್ದಾರೆ. ಗಡಿಯಲ್ಲಿ ಚೀನಾ ಕೆಲವೊಂದು ಹೊಸ ತಾಣಗಳಿಗೆ ಸೇನಾ ತುಕಡಿ ನಿಯೋಜಿಸಿತು. ಅಲ್ಲಿ ಪ್ರತಿರೋಧ ಒಡ್ಡುವುದು ನಮಗೆ ಹೊಸತು. ನಾವು ಕೂಡಾ ಅಂತಹ ಸ್ಥಳಗಳಿಗೆ ಸೇನೆ ನಿಯೋಜಿಸಿದೆವು. ಅದೊಂದು ಸಂಕೀರ್ಣವಾದ ಸ್ಥಿತಿ. ಅಲ್ಲಿ ನಿಯಮಗಳನ್ನು ಪಾಲಿಸಲಾಗಿರಲಿಲ್ಲ. ಎರಡೂ ವರ್ಷದ ಹಿಂದೆ ಗಾಲ್ವಾನ್‌ನಲ್ಲಿಯೂ ಇಂತಹದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲಿ ಹಿಂಸೆಗೆ ತಿರುಗಿದ್ದು, ಕೆಲ ಸಾವುಗಳಾದವು’ ಎಂದರು.

ಆ ನಂತರ ನಾವು ಸಂಘರ್ಷ ನಡೆದ ಕೆಲ ತಾಣಗಳ ಕುರಿತು ಸಂಧಾನ ನಡೆಸಿದವು. ಅದು, ಫಲಿತಾಂಶ ನೀಡಿದೆಯಾ ಎಂದು ಪ್ರಶ್ನಿಸಬಹುದು. ಇಂಥ ಕೆಲ ತಾಣಗಳಿಗೆ ಸಂಬಂಧಿಸಿದ ವಿವಾದಗಳು ಬಗೆಹರಿದಿವೆ ಎಂದು ಜೈಶಂಕರ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.