ADVERTISEMENT

ದೇಶಕ್ಕೆ ತೊಂದರೆ ಕೊಡುವವರ ವಿರುದ್ಧ ನಿರ್ಣಾಯಕ ಕ್ರಮ: ಜಿ.ಕೃಷ್ಣಾರೆಡ್ಡಿ ಎಚ್ಚರಿಕೆ

ಕೇಂದ್ರ ಗೃಹಖಾತೆ ರಾಜ್ಯ ಸಚಿವ ಜಿ.ಕೃಷ್ಣಾರೆಡ್ಡಿ ಎಚ್ಚರಿಕೆ

ಪಿಟಿಐ
Published 16 ಅಕ್ಟೋಬರ್ 2020, 10:32 IST
Last Updated 16 ಅಕ್ಟೋಬರ್ 2020, 10:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುರುಗ್ರಾಮ: ‘ವಸುದೈವ ಕುಟುಂಬಕಂ‘ ಅಥವಾ ವಿಶ್ವವೇ ಒಂದು ಕುಟುಂಬ ಎಂಬ ಭಾರತದ ನಂಬಿಕೆಯನ್ನು ಯಾರೇ ಹಾಳುಗೆಡವಲು ಪ್ರಯತ್ನಿಸಿದರೆ ಅಂಥವರ ವಿರುದ್ಧ ನಿರ್ಣಾಯಕ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ದೇಶ ಸಮರ್ಥವಾಗಿದೆ‘ ಎಂದು ಕೇಂದ್ರ ಗೃಹಖಾತೆ ರಾಜ್ಯ ಸಚಿವ ಜಿ. ಕೃಷ್ಣಾರೆಡ್ಡಿ ಹೇಳಿದ್ದಾರೆ.

ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) 36ನೇ ರೈಸಿಂಗ್ ಡೇ ಅಂಗವಾಗಿ ಶುಕ್ರವಾರ ಇಲ್ಲಿ ನಡೆದ ಸಮಾರಂಭದಲ್ಲಿ ‘ಬ್ಲಾಕ್‌ ಕ್ಯಾಟ್‌‘ ಕಮಾಂಡೊಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಭಯೋತ್ಪಾದಕ ಕೃತ್ಯಗಳನ್ನು ಹತ್ತಿಕ್ಕಲು, ಒತ್ತೆಯಾಳುಗಳ ರಕ್ಷಣೆ ಹಾಗೂ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ 1984ರಲ್ಲಿ ರಾಷ್ಟ್ರೀಯ ಭದ್ರತಾ ಪಡೆಯನ್ನು ಸ್ಥಾಪಿಸಿತು.

ADVERTISEMENT

‘ನಮ್ಮ ದೇಶವು ಯಾವುದೇ ವ್ಯಕ್ತಿ ಅಥವಾ ದೇಶಕ್ಕೆ ಕೆಟ್ಟದನ್ನು ಮಾಡಬೇಕೆಂದು ಯೋಚಿಸುವುದಿಲ್ಲ. ನಾವು ವಿಶ್ವವೇ ಒಂದು ಕುಟುಂಬ ಎಂದು ನಂಬಿದ್ದೇವೆ. ಯಾರಾದರೂ ನಮ್ಮ ದೇಶದ ನಂಬಿಕೆಯನ್ನು ಹಾಳುಗೆಡವಲು ಯೋಚಿಸಿದರೆ, ಅಂಥವರ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳಲು ನಾವು ಸಮರ್ಥರಿದ್ದೇವೆ‘ ಎಂದು ಹೇಳಿದರು.

‘ಭಯೋತ್ಪಾದಕರು ಹೊಸ ಹೊಸ ತಂತ್ರಜ್ಞಾನಗಳು ಮತ್ತು ತಂತ್ರಗಳೊಂದಿಗೆ ದುಷ್ಕೃತ್ಯ ನಡೆಸಲು ಯೋಜಿಸುತ್ತಿರುತ್ತಾರೆ. ಹೀಗಾಗಿ ನಮ್ಮ ವಿಶೇಷ ಭಯೋತ್ಪಾದಕ ಪಡೆಗಳು ತರಬೇತಿ ಮತ್ತು ತಂತ್ರಜ್ಞಾನದ ವಿಷಯದಲ್ಲಿ ಅವರಿಗಿಂತ ಹತ್ತು ಹೆಜ್ಜೆ ಮುಂದಿರಬೇಕು‘ ಎಂದು ಸಚಿವರು ತಿಳಿಸಿದರು.

ಶುಕ್ರವಾರ ನಡೆದ ಎನ್‌ಎಸ್‌ಜಿ 36ನೇ ರೈಸಿಂಗ್ ಡೇ ಕಾರ್ಯಕ್ರಮದಲ್ಲಿ ಮಾತನಾಡಿದ ಎನ್‌ಎಸ್‌ಜಿ ಪ್ರಧಾನ ನಿರ್ದೇಶಕ (ಹೆಚ್ಚುವರಿ ಉಸ್ತುವಾರಿ) ಎಸ್‌.ಎಸ್‌.ದೇಸ್ವಾಲ್ ಅವರು, ‘ಶ್ರೀಲಂಕಾ ಪ್ರಧಾನಿಯವರಿಗೆ ರಕ್ಷಣೆ ನೀಡುವ ಪ್ರಧಾನಿಯವರ ಭದ್ರತಾ ವಿಭಾಗದ 21 ಸಿಬ್ಬಂದಿಗೆ ಎನ್‌ಎಸ್‌ಜಿಯವರು ನಿಕಟ ರಕ್ಷಣಾ ಕೌಶಲದ ತರಬೇತಿ ನೀಡಿದ್ದಾರೆ. ನಮ್ಮ ತಂಡದ ತರಬೇತಿಯನ್ನು ಶ್ರೀಲಂಕಾದ ಪ್ರಧಾನಿಯವರು ಶ್ಲಾಘಿಸಿ ಪತ್ರ ಬರೆದಿದ್ದಾರೆ‘ ಎಂದು ನೆನಪಿಸಿಕೊಂಡರು. ಆದರೆ ಯಾವ ಅವಧಿಯಲ್ಲಿ ಈ ತರಬೇತಿ ನೀಡಲಾಗಿದೆ ಎಂಬ ಮಾಹಿತಿಯನ್ನು ಅವರು ನೀಡಲಿಲ್ಲ.

ವಿಶ್ವ ದರ್ಜೆಯ ‘ಶೂನ್ಯ – ದೋಷರಹಿತ ಪಡೆ‘ ಎಂದು ಗುರುಸಿಕೊಂಡಿರುವ ಎನ್‌ಎಸ್‌ಜಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಯುದ್ದೋಪಕರಣಗಳನ್ನು ಹೊಂದಿದೆ‘ ಎಂದು ದೇಸ್ವಾಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.