ADVERTISEMENT

ಭಾರತಕ್ಕೆ 5 ಸಾವಿರ ಉಚಿತ ವೆಂಟಿಲೇಟರ್: ಕೆನಡಾದೊಂದಿಗೆ ವೈದ್ಯರ ಮಾತುಕತೆ

ಪಿಟಿಐ
Published 6 ಮೇ 2021, 11:15 IST
Last Updated 6 ಮೇ 2021, 11:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಕಳೆದ ವರ್ಷ ಖರೀದಿಸಿ, ಬಳಕೆಯಾಗದೇ ಉಳಿದಿರುವ 5 ಸಾವಿರ ವೆಂಟಿಲೇಟರ್‌ಗಳನ್ನು ಭಾರತಕ್ಕೆ ಉಚಿತವಾಗಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿನ ಪ್ರಭಾವಿ ಇಂಡಿಯನ್‌– ಅಮೆರಿಕನ್ ವೈದ್ಯರ ಗುಂಪೊಂದು ಕೆನಡಾ ಸರ್ಕಾರದೊಂದಿಗೆ ಮಾತುಕತೆ ಆರಂಭಿಸಿದೆ.

ಈ ಕುರಿತು ಸುದ್ದಿ ಸಂಸ್ಥೆ ಜತೆ ಮಾತನಾಡಿದ ಭಾರತೀಯ ಮೂಲದ ಅಮೆರಿಕ ಶಸ್ತ್ರಚಿಕಿತ್ಸಕ ಒಕ್ಕೂಟದ(ಎಎಪಿಐ) ಅಧ್ಯಕ್ಷ ಡಾ. ಸುಧಾಕರ್ ಜೊನ್ನಲಗಡ್ಡ, ‘ಕೆನಡಾ ಸರ್ಕಾರದ ಬಳಿ 5 ಸಾವಿರ ವೆಂಟಿಲೇಟರ್‌ಗಳಿವೆ. ಇವು ಕೆನಡಾ ರೆಡ್‌ಕ್ರಾಸ್‌ ಸಂಸ್ಥೆಗೆ ಒಳಪಟ್ಟಿವೆ. ಪ್ರಸ್ತುತ ಭಾರತದಲ್ಲಿರುವ ಕೋವಿಡ್‌ ಬಿಕ್ಕಟ್ಟನ್ನು ಬಗೆಹರಿಸಲು, ಭಾರತದ ರೆಡ್‌ ಕ್ರಾಸ್ ಸಂಸ್ಥೆಯ ಮೂಲಕವೇ ವೆಂಟಿಲೇಟರ್‌ಗಳನ್ನು ಉಚಿತವಾಗಿ ನೀಡುವಂತೆ ಕೆನಡಾ ಸರ್ಕಾರವನ್ನು ಕೇಳುತ್ತಿದ್ದೇವೆ‘ ಎಂದು ಹೇಳಿದ್ದಾರೆ.

‘ಭಾರತ ಎದುರಿಸುತ್ತಿರುವ ಪ್ರಮುಖ ಆರೋಗ್ಯ ಬಿಕ್ಕಟ್ಟನ್ನು ಪರಿಹರಿಸಲು ಈ ವೆಂಟಿಲೇಟರ್‌ಗಳನ್ನು ಉಚಿತವಾಗಿ ನೀಡುವಂತೆ ನಾವು ಮಾಡಿರುವ ಮನವಿಯನ್ನು ಕೆನಡಾ ಸರ್ಕಾರ ಒಪ್ಪುವ ವಿಶ್ವಾಸವಿದೆ‘ ಎಂದು ಜೊನ್ನಲಗಡ್ಡ ಹೇಳಿದರು.

ADVERTISEMENT

ಎಎಪಿಐ ಸಂಘದ ಅಧ್ಯಕ್ಷೆ ಡಾ. ಅನುಪಮ ಗೋಟಿಯಮುಕುಲಾ, ‘ಈ ವಿಷಯಕ್ಕೆ ಸಂಬಂಧಿಸಿದಂತೆ ಕೆನಡಾ ಸರ್ಕಾರದೊಂದಿಗೆ ಬುಧವಾರ ಮಾತನಾಡಿದ್ದೇವೆ. ಎಎಪಿಐ ಸಹಯೋಗದೊಂದಿಗೆ ವೆಂಟಿಲೇಟರ್‌ಗಳನ್ನು ಭಾರತಕ್ಕೆ ಕಳುಹಿಸಲು ಸಿದ್ಧರಿದ್ದಾರೆ‘ ಎಂದು ಹೇಳಿದರು.

ಭಾರತೀಯ-ಅಮೆರಿಕನ್ ವೈದ್ಯರು ಭಾರತಕ್ಕೆ ನೆರವು ನೀಡಲು ತುಂಬಾ ಉತ್ಸುಕರಾಗಿದ್ದಾರೆ. ಭಾರತದಲ್ಲಿ ರೋಗಿಗಳಿಗೆ ಉಚಿತವಾಗಿ ಟೆಲಿಮೆಡಿಸಿನ್ ಮತ್ತು ಆರೋಗ್ಯ ಸೇವೆ ಒದಗಿಸಲು ಬೇಕಾಗಿರುವ ವೇದಿಕೆಯನ್ನು ಅಭಿವೃದ್ಧಿಪಡಿಸುವಂತೆ ಎಎಪಿಐ ವೈದ್ಯರ ತಂಡ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸಿದೆ ಎಂದು ಡಾ. ಗೋಟಿಯಮುಕುಲಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.