ADVERTISEMENT

ದೇಶೀಯ, ವಿದೇಶಿ ವಿವಿಗಳಿಂದ ಶೀಘ್ರದಲ್ಲೇ ದ್ವಿ ಪದವಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 17:20 IST
Last Updated 19 ಏಪ್ರಿಲ್ 2022, 17:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಶೈಕ್ಷಣಿಕ ಸಹಯೋಗದ ಮೂಲಕ ಭಾರತೀಯ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಿಂದ ಜಂಟಿ ಅಥವಾ ದ್ವಿ ಪದವಿಗಳನ್ನು ಪಡೆಯಬಹುದು. ಇದರಿಂದ ವಿದ್ಯಾರ್ಥಿಗಳು ವಿದೇಶಿ ವಿ.ವಿಗಳ ಪದವಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತದೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷ ಎಂ. ಜಗದೀಶ್‌ ಕುಮಾರ್‌ ತಿಳಿಸಿದರು.

ಮಂಗಳವಾರ ನಡೆದ ಸಭೆಯಲ್ಲಿ ಯುಜಿಸಿ ಈ ನಿರ್ಧಾರವನ್ನು ಕೈಗೊಂಡಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಂಸ್ಥೆಯಿಂದ (ನ್ಯಾಕ್‌) ಮಾನ್ಯತೆ ಪಡೆದು ಕನಿಷ್ಠ 3.01 ಅಂಕಗಳನ್ನು ಹೊಂದಿರಬೇಕು. ಇಲ್ಲವೇ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಪಟ್ಟಿಯ (ಎನ್ಐಆರ್‌ಎಫ್‌) ಅಗ್ರ 100 ಶ್ರೇಯಾಂಕದ ಒಳಗೆ ಕಾಲೇಜುಗಳು ಇರಬೇಕು.

ADVERTISEMENT

ಟೈಮ್ಸ್‌ ಹೈಯರ್‌ ಎಜುಕೇಶನ್‌ ಅಥವಾ ಕ್ಯೂಎಸ್‌ ಜಾಗತಿಕ ವಿಶ್ವವಿದ್ಯಾಲಯದಿಂದ ಪ್ರಮಾಣೀಕರಿಸಲ್ಪಟ್ಟ 1000ಅಗ್ರ ಶ್ರೇಯಾಂಕಿತ ಹೊಂದಿದ ಯಾವುದೇ ವಿದೇಶಿ ಕಾಲೇಜುಗಳೊಡನೆ ಸಹಯೋಗ ನಡೆಸಬಹುದಾಗಿದೆ. ಇದಕ್ಕೆ ಯುಜಿಸಿಯಿಂದ ಪೂರ್ವಾನುಮತಿಯ ಅಗತ್ಯವಿಲ್ಲ’ ಎಂದು ಹೇಳಿದರು.

‘ಈ ಕಾರ್ಯಕ್ರಮದಡಿ ವಿದೇಶಿ ವಿದ್ಯಾಸಂಸ್ಥೆಗಳಿಂದ ವಿದ್ಯಾರ್ಥಿಗಳು ಶೇಕಡ 30ಕ್ಕಿಂತ ಹೆಚ್ಚು ಕ್ರೆಡಿಟ್‌ಗಳನ್ನು ಪಡೆದಿರಬೇಕು. ಆದರೆ ಆನ್‌ಲೈನ್‌ ಅಥವಾ ದೂರ ಶಿಕ್ಷಣ ಹಾಗೂ ಮುಕ್ತ ವಿವಿಗಳಲ್ಲಿ ನೀಡಲಾಗುವ ಪದವಿ ಕಾರ್ಯಕ್ರಮಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ’ ಎಂದು ಜಗದೀಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.