ADVERTISEMENT

ಕೊರೊನಾ ಯೋಧರಿಗೆ ಸೇನೆಯಿಂದ ಇಂದು ಗೌರವ: ಆಸ್ಪತ್ರೆಗಳ ಮೇಲೆ ಪುಷ್ಪವೃಷ್ಟಿ 

​ಪ್ರಜಾವಾಣಿ ವಾರ್ತೆ
Published 3 ಮೇ 2020, 2:30 IST
Last Updated 3 ಮೇ 2020, 2:30 IST
ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳ ಪ್ರಾತಿನಿಧಿಕ ಚಿತ್ರ
ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳ ಪ್ರಾತಿನಿಧಿಕ ಚಿತ್ರ    

ನವದೆಹಲಿ (ಪಿಟಿಐ): ಕೊರೊನಾ ವೈರಸ್‌ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವವರಿಗೆ ಇಂದು ಗೌರವ ಸಲ್ಲಿಸಲು ಭಾರತೀಯ ಸೇನೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

‘ಯುದ್ಧ ವಿಮಾನಗಳ ಮೂಲಕ ಮೇ 3 ರಂದು ಶ್ರೀನಗರದಿಂದ ತಿರುವನಂತಪುರದವರೆಗೆ, ದಿಬ್ರೂಗರ್‌ನಿಂದ ಕಛ್‌ವರೆಗೆ ವೈಮಾನಿಕ ಪ್ರದರ್ಶನದ ಮೂಲಕ ಗೌರವ ವಂದನೆ ಸಲ್ಲಿಸಲಾಗುವುದು. ಆಸ್ಪತ್ರೆಗಳ ಮೇಲೆ ಪುಷ್ಪವೃಷ್ಟಿ ಮಾಡಲಾಗುವುದು. ನಮ್ಮನ್ನು ಸುರಕ್ಷಿತವಾಗಿಡಲು ಶ್ರಮಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಲಾಗುವುದು,’ ಎಂದು ಸೇನೆಯ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ, ನೌಕಾಪಡೆಯ ಮುಖ್ಯಸ್ಥ ಮುಖ್ಯಸ್ಥ ಅಡ್ಮಿರಲ್‌ ಕರಂಬೀರ್‌ ಸಿಂಗ್, ‌ವಾಯುಪಡೆಯ ಮುಖ್ಯಸ್ಥ ಆರ್.ಕೆ.ಎಸ್. ಬದೌರಿಯಾ‌ ಶುಕ್ರವಾರ ಜಂಟಿ ಯಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

‘ವೈಮಾನಿಕ ಪ್ರದರ್ಶನ, ಹಡಗುಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸುವುದು, ಆಸ್ಪತ್ರೆಗಳ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ಕೊರೊನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸೇವಕರಿಗೆ ಸೇನೆ ಗೌರವ ಸಲ್ಲಿಸಲಿದೆ’

ADVERTISEMENT

ಇದೇ ವೇಳೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಗೊಳಿಸಲು ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಗೂ ಗೌರವ ಸಲ್ಲಿಸಲಾಗುತ್ತದೆ. ಇಂದು ಬೆಳಿಗ್ಗೆ ದೆಹಲಿಯ ಪೊಲೀಸ್ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪೊಲೀಸರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ.

ಪಶ್ಚಿಮ ಏರ್ ಕಮಾಂಡ್‌ನ ಭಾರತೀಯ ವಾಯುಪಡೆಯ (ಐಎಎಫ್) ಫೈಟರ್ ಜೆಟ್‌ಗಳು ಬೆಳಿಗ್ಗೆ 10. 30ಕ್ಕೆ ದೆಹಲಿಯದ್ಯಾಂತ ಇರುವ ಆಸ್ಪತ್ರೆಗಳ ಮೇಲೆ ಪಷ್ಪವೃಷ್ಟಿಗರೆಯಲಿದೆ. ಮುಂಬೈನಲ್ಲಿ, ಮಿಲಿಟರಿ ವಿಮಾನಗಳು ಕಿಂಗ್ ಎಡ್ವರ್ಡ್ ಮೆಮೋರಿಯಲ್ (ಕೆಇಎಂ) ಆಸ್ಪತ್ರೆ ಮತ್ತು ಕಸ್ತೂರಬಾ ಗಾಂಧಿ ಆಸ್ಪತ್ರೆಯ ಮೇಲೆ ಹೂ ಚೆಲ್ಲಲಿದೆ.

ಪ್ರಧಾನಿ ಮೆಚ್ಚುಗೆ

ಸೇನೆಯ ಈ ನಡೆಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಟ್ವೀಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. "ನಮ್ಮ ಸಶಸ್ತ್ರ ಪಡೆಗಳು ಯಾವಾಗಲೂ ರಾಷ್ಟ್ರವನ್ನು ಸುರಕ್ಷಿತವಾಗಿರಿಸಿಕೊಂಡಿವೆ. ವಿಪತ್ತಿನ ಸಮಯದಲ್ಲಿಯೂ ಅವರು ಅವರು ಜನರಿಗೆ ಸಹಾಯ ಮಾಡಿದ್ದಾರೆ. ದೇಶವನ್ನು ಕೋವಿಡ್‌ ಮುಕ್ತಗೊಳಿಸಲು ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವವರಿಗೆ ನಮ್ಮ ಪಡೆಗಳು ವಿಭಿನ್ನ ರೀತಿಯಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತಿವೆ,’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.