ADVERTISEMENT

ಪೂರ್ವ ಲಡಾಖ್‌: ಯೋಧರಿಗೆ ಅತ್ಯಾಧುನಿಕ ಸ್ಮಾರ್ಟ್‌ ಕ್ಯಾಂಪ್‌

ವಿದ್ಯುತ್‌, ನೀರು, ಹೀಟರ್‌ಗಳಿರುವ ಟೆಂಟ್‌ * ಚಳಿಗಾಲದಲ್ಲಿ –40 ಡಿಗ್ರಿ ಸೆಲ್ಸಿಯಸ್‌ ಕುಸಿಯುವ ತಾಪಮಾನ

ಪಿಟಿಐ
Published 18 ನವೆಂಬರ್ 2020, 12:25 IST
Last Updated 18 ನವೆಂಬರ್ 2020, 12:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲೇಹ್‌: ವಾಸ್ತವ ನಿಯಂತ್ರಣ ರೇಖೆಯ(ಎಲ್‌ಎಸಿ) ಸಮೀಪ ಪೂರ್ವ ಲಡಾಖ್‌ನಲ್ಲಿ ನಿಯೋಜಿಸಲ್ಪಟ್ಟಿರುವ ಯೋಧರಿಗಾಗಿ ಹೀಟರ್‌ಗಳನ್ನು ಅಳವಡಿಸಿರುವ ಅತ್ಯಾಧುನಿಕ ಶಿಬಿರಗಳ ನಿರ್ಮಾಣವನ್ನು ಭಾರತೀಯ ಸೇನೆಯು ಪೂರ್ಣಗೊಳಿಸಿದೆ.

ಭಾರತ ಮತ್ತು ಚೀನಾ ಸೇನೆಯ ಹಿರಿಯ ಅಧಿಕಾರಿ ಮಟ್ಟದಲ್ಲಿ ಎಂಟು ಸುತ್ತಿನ ಮಾತುಕತೆ ನಡೆದರೂ, ಗಡಿ ಸಂಘರ್ಷ ಸದ್ಯಕ್ಕೆ ಯಾವುದೇ ರೀತಿಯ ಪರಿಹಾರವು ದೊರೆತಿಲ್ಲ. ಹೀಗಾಗಿ ಮುಂಬರುವ ಕಠಿಣ ಚಳಿಗಾಲದಲ್ಲೂ ಸೇನಾಪಡೆಯು ಸಮರ್ಪಕವಾದ ಕಾರ್ಯಾಚರಣೆ ಸಾಮರ್ಥ್ಯವನ್ನು ಹೊಂದಿರಬೇಕು ಎನ್ನುವ ಉದ್ದೇಶದೊಂದಿಗೆ ಈ ಶಿಬಿರಗಳನ್ನು ನಿರ್ಮಿಸಲಾಗಿದೆ. ಕಳೆದ ಕೆಲ ವರ್ಷದಿಂದ ಈ ಭಾಗದಲ್ಲಿ ಸ್ಮಾರ್ಟ್‌ ಕ್ಯಾಂಪ್‌ ನಿರ್ಮಾಣ ಮಾಡಲಾಗುತ್ತಿದ್ದು, ಇದೀಗ ವಿದ್ಯುತ್‌ ಸಂಪರ್ಕ, ನೀರಿನ ವ್ಯವಸ್ಥೆ, ಮೈಕೊರೆಯುವ ಚಳಿಯನ್ನು ತಡೆಯಲು ಹೀಟರ್‌ಗಳ ವ್ಯವಸ್ಥೆ, ಆರೋಗ್ಯಕರ ವಾತಾವರಣ ಹಾಗೂ ಸ್ವಚ್ಛತೆಗೆ ಒತ್ತು ನೀಡಿರುವ ಹೊಸ ಶಿಬಿರಗಳನ್ನು ನಿರ್ಮಿಸಲಾಗಿದೆ ಎಂದು ಸೇನೆಯು ತಿಳಿಸಿದೆ.

ಕಳೆದ ಮೇ ತಿಂಗಳಲ್ಲಿ ಎಲ್‌ಎಸಿಯಲ್ಲಿ ಚೀನಾ ಜೊತೆಗಿನ ಸಂಘರ್ಷದ ಬಳಿಕ 50 ಸಾವಿರಕ್ಕೂ ಅಧಿಕ ಯೋಧರನ್ನು ಪೂರ್ವ ಲಡಾಖ್‌ನ ಹಲವು ಪರ್ವತ ಪ್ರದೇಶಗಳಲ್ಲಿ ಭಾರತೀಯ ಸೇನೆಯು ನಿಯೋಜಿಸಿದೆ. ಚೀನಾವೂ ಈ ಭಾಗದಲ್ಲಿ ಇಷ್ಟೇ ಸಂಖ್ಯೆಯ ಯೋಧರನ್ನು ನಿಯೋಜಿಸಿದೆ.

ADVERTISEMENT

–40 ಡಿಗ್ರಿ ಸೆಲ್ಸಿಯಸ್‌ ತಾಪಮಾನ: ‘ಎಲ್‌ಎಸಿಯ ಮುಂಚೂಣಿಯಲ್ಲಿರುವ ಯೋಧರಿಗೆ ‘ಹೀಟೆಡ್‌ ಟೆಂಟ್ಸ್‌’ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಚಳಿಗಾಲದಲ್ಲಿ ಈ ಭಾಗದಲ್ಲಿ ತಾಪಮಾನ –30 ರಿಂದ –40 ಡಿಗ್ರಿ ಸೆಲ್ಸಿಯಸ್‌ವರೆಗೂ ಕುಸಿಯುತ್ತದೆ. ಕೆಲವೊಮ್ಮೆ 40 ಅಡಿ ಹಿಮಪಾತವೂ ಸಂಭವಿಸುತ್ತದೆ. ಜೊತೆಗೆ ಈ ಪ್ರದೇಶವನ್ನು ಸಂಪರ್ಕಿಸುವ ರಸ್ತೆಗಳೂ ಮುಚ್ಚಲ್ಪಡುತ್ತವೆ. ಹೀಗಾಗಿ ಈ ವಲಯದಲ್ಲಿರುವ ಯೋಧರಿಗೆ ಸೂಕ್ತ ಸೌಲಭ್ಯವಿರುವ ವಸತಿ ಸೌಲಭ್ಯವನ್ನು ನಿರ್ಮಿಸಲಾಗಿದೆ’ ಎಂದು ಸೇನೆಯು ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.