ADVERTISEMENT

ವೈರಲ್ ವಿಡಿಯೊ | ಶೀತಗಾಳಿಗೆ ಬೆಚ್ಚದೆ ತಾಯಿ ನೋವಿಗೆ ಆಸರೆಯಾದ ಯೋಧರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜನವರಿ 2020, 9:27 IST
Last Updated 21 ಜನವರಿ 2020, 9:27 IST
   

ಶೀತಗಾಳಿಯಲ್ಲಿ ನಡುಗುತ್ತಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ಯೋಧರು ಗರ್ಭಿಣಿಯನ್ನು ಸಕಾಲಕ್ಕೆ ಆಸ್ಪತ್ರೆಗೆ ಸೇರಿಸಲು ಮಾನವೀಯ ಹಸ್ತ ಚಾಚಿ, ದೇಶದ ಗಮನ ಸೆಳೆಯುತ್ತಿದ್ದಾರೆ. ಯೋಧರ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾವಿರಾರು ಮಂದಿ ಹೊಗಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಶೀತಗಾಳಿ ಬೀಸುತ್ತಿದೆ. ಉಷ್ಣಾಂಶವೂ ಮೈನಸ್ 1ಕ್ಕಿಂತ ಕಡಿಮೆಯಾಗಿದೆ. ಗರ್ಭಿಣಿಯೊಬ್ಬರಿಗೆ ಹೆರಿಗೆ ಕಾಣಿಸಿಕೊಂಡಾಗ ಅವರಿಗೆ ಅಣ್ಣಂದಿರಂತೆ ಒತ್ತಾಸೆಯಾಗಿ ನಿಂತರವರು ಯೋಧರು.

ನೂರಕ್ಕೂ ಹೆಚ್ಚು ಯೋಧರು ಮತ್ತು ಸುಮಾರು 30 ನಾಗರಿಕರು ಗರ್ಭಿಣಿ ಶಾಮಿಮಾಅವರ ಮನೆಗೆ ಧಾವಿಸಿ, ಹಿಮ ತುಂಬಿದ್ದ ರಸ್ತೆ, ಒಂದೇ ಸಮನೆ ಬೀಸುತ್ತಿದ್ದ ಶೀತಗಾಳಿಯ ನಡುವೆಯೂ ಆಕೆಯನ್ನು ಸ್ಟ್ರೆಚರ್‌ನಲ್ಲಿ ಹೊತ್ತು ನಾಲ್ಕು ತಾಸು ನಡೆದು ಆಸ್ಪತ್ರೆಗೆ ಸೇರಿಸಿದರು.

ADVERTISEMENT

‘ಆಸ್ಪತ್ರೆಯಲ್ಲಿ ಶಾಮಿಮಾ ಹೆಣ್ಣುಮಗುವಿಗೆ ಜನ್ಮ ನೀಡಿದರು. ತಾಯಿ–ಮಗು ಇದೀಗ ಕ್ಷೇಮವಾಗಿದ್ದಾರೆ’ ಎಂಬ ಒಕ್ಕಣೆಯೊಂದಿಗೆ ಸೇನೆಯ ಚಿನಾರ್‌ ಕಾರ್ಪ್ಸ್‌ ತನ್ನ ಟ್ವಿಟರ್‌ ಖಾತೆಯಲ್ಲಿ ವಿಡಿಯೊ ತುಣುಕನ್ನು ಟ್ವೀಟ್ ಮಾಡಿತ್ತು.

ಇದನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸುಮಾರು ನಾಲ್ಕು ಸಾವಿರ ಮಂದಿ ರಿಟ್ವೀಟ್ ಮಾಡಿದ್ದರು. 13.3 ಸಾವಿರ ಮಂದಿ ಲೈಕ್ ಮಾಡಿದ್ದರು. 685 ಮಂದಿ ಕಾಮೆಂಟ್ ಮಾಡಿದ್ದಾರೆ.

‘ನಮ್ಮ ಸೇನೆಯು ಶೌರ್ಯ ಮತ್ತು ವೃತ್ತಿಪರತೆಗೆ ಹೆಸರುವಾಸಿಯಾಗಿದೆ. ಮಾನವೀಯ ಆಶಯಗಳನ್ನು ಎತ್ತಿಹಿಡಿಯುತ್ತದೆ. ಜನರಿಗೆ ಸಹಾಯ ಬೇಕಿದ್ದಾಗಲೆಲ್ಲಾ ಸೇನೆಯು ಮುಂದೆ ಬಂದು ತನ್ನ ಕೈಲಾದ ಎಲ್ಲವನ್ನೂ ಮಾಡಿದೆ. ನಮ್ಮ ಸೇನೆಯ ಬಗ್ಗೆ ನನಗೆ ಹೆಮ್ಮೆಯಿದೆ. ಶಾಮಿಮಾ ಮತ್ತು ಮಗುವಿಗೆ ಉತ್ತಮ ಆರೋಗ್ಯ ಸಿಗಲಿ ಎಂದುಪ್ರಾರ್ಥಿಸುತ್ತೇನೆ’ ಎಂದು ನರೇಂದ್ರ ಮೋದಿ ವಿಡಿಯೊ ರಿಟ್ವಿಟ್ ಮಾಡುವಾಗ ಒಕ್ಕಣೆ ಬರೆದುಕೊಂಡಿದ್ದಾರೆ.

ಕಾಮೆಂಟ್ ಮಾಡಿರುವ ಕೆಲವರುಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿಸೇನೆ ಆರಂಭಿಸಿರುವ ಸದ್ಭಾವನಾ, ಸೂಪರ್ 30, ಆರ್ಮಿ ಗುಡ್‌ವಿಲ್ ಸ್ಕೂಲ್ ಸೇರಿದಂತೆ ಹಲವುಕಾರ್ಯಕ್ರಮಗಳನ್ನು ಪ್ರಸ್ತಾಪಿಸಿದ್ದಾರೆ. ಸೇನಾ ದಿನಾಚರಣೆ ಪ್ರಯುಕ್ತ ಶುಭ ಕೋರುವ ಸಾಕಷ್ಟು ಪೋಸ್ಟರ್‌ಗಳನ್ನು ಕಾಮೆಂಟ್‌ ಮಾಡುವಾಗ ಬಳಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.