ADVERTISEMENT

ಜಿನೋಮ್‌ ದತ್ತಾಂಶ ಸ್ಥಾಪನೆ: 10 ಸಾವಿರ ಭಾರತೀಯರ ಡಿಎನ್‌ಎ ಕುರಿತ ಮಾಹಿತಿ ಲಭ್ಯ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 16:12 IST
Last Updated 9 ಏಪ್ರಿಲ್ 2025, 16:12 IST
-
-   

ನವದೆಹಲಿ: ದೇಶದ 83 ವಿಭಿನ್ನ ಗುಂಪುಗಳಿಗೆ ಸೇರಿದ ಹಾಗೂ ಆರೋಗ್ಯವಂತರಾದ 10 ಸಾವಿರ ಜನರ ಜಿನೋಮ್‌ ಡೇಟಾಬೇಸ್‌ (ವರ್ಣತಂತುಗಳ ಸಂರಚನೆಯ ದತ್ತಾಂಶ) ಸ್ಥಾಪಿಸಿದ್ದಾಗಿ ಭಾರತೀಯ ಜೀವವಿಜ್ಞಾನಿಗಳು ಮಂಗಳವಾರ ಘೋಷಿಸಿದ್ದಾರೆ.

ಜಿನೋಮ್‌ ದತ್ತಾಂಶ ಒಳಗೊಂಡ ಈ ವಿಶಿಷ್ಟ ವೇದಿಕೆಯು, ಭವಿಷ್ಯದಲ್ಲಿ ‘ನಿಖರ ಔಷಧಿ’ ಅಭಿವೃದ್ಧಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಜೀವವಿಜ್ಞಾನಿಗಳು ಹೇಳಿದ್ದಾರೆ.

‘ಜಿನೋಮ್‌ ಇಂಡಿಯಾ ಪ್ರಾಜೆಕ್ಟ್‌’ನಡಿ ಐದು ವರ್ಷಗಳ ಸಂಶೋಧನೆ ಫಲವಾಗಿ ಈ ದತ್ತಾಂಶ ಸಿದ್ಧಪಡಿಸಲಾಗಿದೆ. ಈ ಉದ್ದೇಶಕ್ಕಾಗಿ ಬೆಂಗಳೂರಿನ ಐಐಎಸ್‌ಸಿ, ನಿಮ್ಹಾನ್ಸ್ ಹಾಗೂ ಸೆಂಟರ್‌ ಫಾರ್‌ ಬಯೊಲಾಜಿಕಲ್‌ ಸೈನ್ಸಸ್‌ ಸೇರಿ ದೇಶದ 20 ಪ್ರತಿಷ್ಠಿತ ಸಂಸ್ಥೆಗಳನ್ನು ಒಳಗೊಂಡ ಒಕ್ಕೂಟ ಸ್ಥಾಪಿಸಲಾಗಿದೆ.

ADVERTISEMENT

‘ಜಿನೋಮ್‌ ಇಂಡಿಯಾ ಪ್ರಾಜೆಕ್ಟ್‌ನ ಭಾಗವಾಗಿ ಕೈಗೊಂಡ ಸಂಶೋಧನೆಯಿಂದ ಭಾರತೀಯರ ಡಿಎನ್‌ಎಯಲ್ಲಿ 18 ಕೋಟಿ ವಿಶಿಷ್ಟ ವ್ಯತ್ಯಾಸಗಳಿರುವುದು ಪತ್ತೆಯಾಗಿದೆ. ಈ ಪೈಕಿ ಶೇ 60ರಷ್ಟು ವ್ಯತ್ಯಾಸಗಳು ಅಪರೂಪ ಎಂದೇ ಪರಿಗಣಿಸಲಾಗುತ್ತದೆ’ ಎಂದು ಬಯೊಟೆಕ್ನಾಲಜಿ ಇಲಾಖೆ ಕಾರ್ಯದರ್ಶಿ ರಾಜೇಶ್‌ ಗೋಖಲೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ರಾಜೇಶ್‌ ಗೋಖಲೆ ಅವರು ಈ ಪ್ರಾಜೆಕ್ಟ್‌ನ ಮುಂದಾಳತ್ವ ವಹಿಸಿದ್ದರು. 

‘ದೇಶದ ಆರೋಗ್ಯವಂತ ಭಾರತೀಯರ ವಂಶವಾಹಿಯಲ್ಲಿನ ವೈವಿಧ್ಯವನ್ನು ಅರ್ಥ ಮಾಡಿಕೊಳ್ಳಲು ಹಾಗೂ ರೋಗಗಳಿಗೆ ಕಾರಣವಾಗುವ ವಂಶವಾಹಿಯಲ್ಲಿನ ವ್ಯತ್ಯಾಸಗಳ ಮೌಲ್ಯಮಾಪನಕ್ಕೆ ಈ ಪ್ರಾಜೆಕ್ಟ್ ಆಧಾರ ಒದಗಿಸುತ್ತದೆ’ ಎಂದು ಗೋಖಲೆ ಹೇಳಿದ್ದಾರೆ.

ಪ್ರಮುಖ ಅಂಶಗಳು

* ವ್ಯಕ್ತಿಯ ಚಿಕಿತ್ಸೆಗೆ ಅಗತ್ಯವಿರುವ ನಿರ್ದಿಷ್ಟ ಔಷಧಿ ಅಭಿವೃದ್ಧಿಗೆ ದತ್ತಾಂಶದಿಂದ ಅನುಕೂಲ

* ನಿರ್ದಿಷ್ಟ ಜನರ ಗುಂಪುಗಳಲ್ಲಿ ಕಂಡುಬರುವ ಕಾಯಿಲೆಗಳಿಗೆ ಔಷಧಿಗಳ ಅಭಿವೃದ್ಧಿ 

* 83 ಜನಾಂಗೀಯ ಗುಂಪುಗಳಿಗೆ ಸೇರಿದ 20 ಸಾವಿರ ಜನರ ರಕ್ತದ ಮಾದರಿ ಸಂಗ್ರಹಿಸಿ ಜಿನೋಮ್‌ ಸಿಕ್ವೆನ್ಸಿಂಗ್‌ಗೆ ಒಳಪಡಿಸಲಾಗಿತ್ತು

* ಅಂತಿಮವಾಗಿ 4696 ಪುರುಷರು ಹಾಗೂ 5076 ಮಹಿಳೆಯರ ಜಿನೋಮ್‌ ಸಿಕ್ವೆನ್ಸಿಂಗ್ ಫಲಿತಾಂಶ ಒಳಗೊಂಡ ದತ್ತಾಂಶ ಸಿದ್ಧಪಡಿಸಲಾಗಿದೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.