ಪ್ರಧಾನಿ ನರೇಂದ್ರ ಮೋದಿ
(ಸಂಗ್ರಹ ಚಿತ್ರ)
ನವದೆಹಲಿ: ‘ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಬೆಳೆಯುವ ಕಾಫಿ ವಿಶ್ವದಲ್ಲಿ ಪ್ರಸಿದ್ಧವಾಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ.
ಮನದ ಮಾತು 127ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ಬೆಳೆಯುತ್ತಿರುವ ಕಾಫಿ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಇದು ಭಾರತದ ಕಾಫಿಯನ್ನು
ಜಗತ್ತಿನಾದ್ಯಂತ ಗುರುತಿಸುವಂತೆ ಮಾಡಿದೆ. ಇತ್ತೀಚೆಗೆ ಈಶಾನ್ಯ ಭಾರತದಲ್ಲೂ ಕಾಫಿ ಬೆಳೆಯಲಾಗುತ್ತಿದೆ’ ಎಂದು ಹೇಳಿದ್ದಾರೆ.
ಕರ್ನಾಟಕದ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ, ತಮಿಳುನಾಡಿನ ಪುಲ್ನಿ, ಶೆವರಾಯ್, ನೀಲಗಿರಿ ಮತ್ತು ಅಣ್ಣಾಮಲೈ, ಕೇರಳದ ವಯನಾಡ್, ತಿರುವಾಂಕೂರು ಮತ್ತು ಮಲಬಾರ್‌ನಲ್ಲಿ ಕಾಫಿ ಬೆಳೆಯಲಾಗುತ್ತಿದೆ ಎಂದಿದ್ದಾರೆ.
ಒಡಿಶಾದ ಕೊರಾ ಪುಟ್ ಕಾಫಿಯೂ ಜನಪ್ರಿಯತೆ ಪಡೆಯುತ್ತಿದೆ. ದೇಶದ ವಿವಿಧೆಡೆ ಬೆಳೆಯುವ ಕಾಫಿಯ ವೈವಿಧ್ಯ ನಿಜಕ್ಕೂ ಗಮನಾರ್ಹ ಎಂದು ಅವರು ಹೇಳಿದ್ದಾರೆ.
ಕೆಲವರು, ಕಾಫಿ ಕೃಷಿ ಮೇಲಿನ ಒಲವಿನ ಕಾರಣದಿಂದಾಗಿ ಖಾಸಗಿ ಕಂಪನಿಗಳಲ್ಲಿನ ತಮ್ಮ ಲಾಭದಾಯಕ ಉದ್ಯೋಗ ತೊರೆದು ಕಾಫಿ ಕೃಷಿಗೆ ಮುಂದಾಗಿ, ಯಶಸ್ವಿಯಾಗುತ್ತಿದ್ದಾರೆ. ಕಾಫಿ ಬೆಳೆಯಿಂದ ಹಲವಾರು ಮಹಿಳೆಯರ ಜೀವನವೂ ಹಸನಾಗಿದೆ ಎಂದು ಅವರು ಹೇಳಿದ್ದಾರೆ.
ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ 70ರಷ್ಟಿದೆ. ನಂತರದ ಸ್ಥಾನದಲ್ಲಿ ಕೇರಳ ಮತ್ತು ತಮಿಳುನಾಡು ಇವೆ.
ಬಂಕಿಮ್ ಚಂದ್ರ ಚಟ್ಟೋಪಾದ್ಯಾಯ ಅವರು ಬರೆದ ‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬುತ್ತಿದೆ. ಈ ಗೀತೆಯು ದೇಶವನ್ನು ಅತ್ಯದ್ಬುತವಾಗಿ ಚಿತ್ರಿಸಿದೆ. ಈ ಗೀತೆಯ ಮೌಲ್ಯಗಳನ್ನು ನಾವು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಇದಕ್ಕಾಗಿ ದೇಶದಾದ್ಯಂತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.
ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್‌ನಲ್ಲಿ ಮುಧೋಳ ತಳಿಯ ಶ್ವಾನಗಳು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಯಾಗುತ್ತಿರುವುದರ ಬಗ್ಗೆ ಪ್ರಧಾನಿ ಸಂತಸ ವ್ಯಕ್ತಪಡಿಸಿದ್ದಾರೆ.
ಆಪರೇಷನ್ ಸಿಂಧೂರದ ಯಶಸ್ಸು ಹಾಗೂ ನಕ್ಸಲರ ಭಯ ಕಡಿಮೆಯಾಗಿರುವುದರಿಂದ ಈ ಬಾರಿ ದೇಶದಲ್ಲಿ ಜನರು ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.
ನಮ್ಮ ಬುಡಕಟ್ಟು ಸಮುದಾಯಗಳಲ್ಲಿ ಭಗವಾನ್ ಬಿರ್ಸಾ ಮುಂಡಾ ಮತ್ತು ಕೋಮರಾಮ್ ಭೀಮ್ ಅವರಂತೆಯೇ ಹಲವಾರು ಶ್ರೇಷ್ಠ ಸಾಧಕರು ಆಗಿ ಹೋಗಿದ್ದಾರೆ. ಈ ಎಲ್ಲ ಬಗ್ಗೆಯೂ ನೀವು ಖಂಡಿತವಾಗಿಯೂ ಓದಲೇಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.