ADVERTISEMENT

ಸೇನೆಗೆ ಶಸ್ತ್ರಾಸ್ತ್ರ ಬಲ | ₹39,000 ಕೋಟಿ ಮೌಲ್ಯದ ಯುದ್ಧೋಪಕರಣ ಖರೀದಿಗೆ ಸಮ್ಮತಿ

ಪಿಟಿಐ
Published 2 ಜುಲೈ 2020, 19:30 IST
Last Updated 2 ಜುಲೈ 2020, 19:30 IST
ಮಿಗ್‌ 29 ಯುದ್ಧ ವಿಮಾನ
ಮಿಗ್‌ 29 ಯುದ್ಧ ವಿಮಾನ   

ನವದೆಹಲಿ: ಸುಮಾರು ₹39 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ರಕ್ಷಣಾ ಸಚಿವಾಲಯವು ಗುರುವಾರ ಒಪ್ಪಿಗೆ ನೀಡಿದೆ.

ಭಾರತ–ಚೀನಾ ನಡುವೆ ಗಡಿ ಬಿಕ್ಕಟ್ಟು ತೀವ್ರಗೊಂಡಿರುವ ಸಂದರ್ಭದಲ್ಲಿಯೇ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಖರೀದಿ ಸಮಿತಿಯ (ಡಿಎಸಿ) ಸಭೆಯಲ್ಲಿ ಯುದ್ಧ ಸಲಕರಣೆ ಖರೀದಿಗೆ ನಿರ್ಧರಿಸಲಾಗಿದೆ. ಯುದ್ಧ ವಿಮಾನಗಳು, 1,000 ಕಿ.ಮೀ. ವ್ಯಾಪ್ತಿಯ ಕ್ಷಿಪಣಿ ವ್ಯವಸ್ಥೆ, ಅಸ್ತ್ರ ಕ್ಷಿಪಣಿ ಇದರಲ್ಲಿ ಸೇರಿವೆ. ಈ ಖರೀದಿಯು ಸಶಸ್ತ್ರ ಪಡೆಗಳ ದಾಳಿ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಿದೆ.

ಒಟ್ಟು ವೆಚ್ಚದಲ್ಲಿ ₹31,130 ಕೋಟಿ ಮೊತ್ತದ ಉಪಕರಣಗಳನ್ನು ದೇಶೀಯ ಉದ್ಯಮದಿಂದಲೇ ಖರೀದಿಸಲಾಗುವುದು. ಉಳಿದ ಮೊತ್ತದಲ್ಲಿ ₹7,770 ಕೋಟಿಯು ರಷ್ಯಾದಿಂದ ಮಿಗ್‌–29 ಯುದ್ಧವಿಮಾನ ಖರೀದಿ ಯೋಜನೆಗೆ ವ್ಯಯ ಆಗಲಿದೆ. ಇದಲ್ಲದೆ, ವಿದೇಶಿ ಉಪಕರಣಗಳಿಗೆ ವೆಚ್ಚ ಮಾಡುತ್ತಿರುವ ಮೊತ್ತ ₹352 ಕೋಟಿ ಮಾತ್ರ.

ADVERTISEMENT

ರಷ್ಯಾದ 21 ಮಿಗ್‌–29 ಯುದ್ಧ ವಿಮಾನಗಳು 1980ರ ದಶಕದಲ್ಲಿ ತಯಾರಾಗಿವೆ. ಈಗಿನ ಮಾನದಂಡಗಳಿಗೆ ಅನುಗುಣವಾಗಿ ಅವುಗಳನ್ನು ಮೇಲ್ದರ್ಜೆಗೆ ಏರಿಸಿ ಮಾರಾಟ ಮಾಡುವುದಾಗಿ ರಷ್ಯಾ ಕಳೆದ ವರ್ಷ ಹೇಳಿತ್ತು.ಭಾರತದ ಯುದ್ಧ ವಿಮಾನಗಳ ಸಂಖ್ಯಾಬಲ ಕುಂದಿದ ಕಾರಣ ಇದಕ್ಕೆ ಭಾರತ ಒಪ್ಪಿಗೆ ಸೂಚಿಸಿತ್ತು. ಭಾರತೀಯ ವಾಯುಪಡೆಯ ತಂಡವು ಈ ವಿಮಾನಗಳನ್ನು ಪರಿಶೀಲಿಸಿ ಖರೀದಿಗೆ ಒಪ್ಪಿಗೆ ನೀಡಿತ್ತು.

1,000 ಕಿ.ಮೀ. ವ್ಯಾಪ್ತಿಯ ದೂರಗಾಮಿ, ನೆಲದಿಂದ ಉಡಾಯಿಸಬಹುದಾದ ಕ್ಷಿಪಣಿಗಳ ಅಂತಿಮ ಹಂತದ ಅಭಿವೃದ್ಧಿಗೂ ಅನುಮೋದನೆ ದೊರೆತಿದೆ.‘ಇದು ನಿರ್ಭಯ ಕ್ಷಿಪಣಿ ಶ್ರೇಣಿಯ ಸುಧಾರಿತ ಅವತರಣಿಕೆ. ಇದು ಸಿದ್ಧವಾದರೆ, ಜಗತ್ತಿನ ಅಣ್ವಸ್ತ್ರಯೇತರ ಕ್ಷಿಪಣಿಗಳಲ್ಲಿ ಅತಿ ಹೆಚ್ಚು ವ್ಯಾಪ್ತಿಯ ಕ್ಷಿಪಣಿ ಎನಿಸಿಕೊಳ್ಳಲಿದೆ’ ಎಂದು ಡಿಆರ್‌ಡಿಒ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಆಕಾಶದಿಂದ ಆಕಾಶಕ್ಕೆ ಚಿಮ್ಮಿಸಬಹುದಾದ ಅಸ್ತ್ರ ಕ್ಷಿಪಣಿ, ಸಾಫ್ಟ್‌ವೇರ್‌ ಆಧರಿತ ರೇಡಿಯೊ, ಪಿನಾಕ ಶ್ರೇಣಿಯ ಕ್ಷಿಪಣಿ, ಭೂದಾಳಿ ಕ್ಷಿಪಣಿಗಳೆಲ್ಲವೂ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಸಮರ ಸಾಧನಗಳು. ದೇಶೀಯ ತಂತ್ರಜ್ಞಾನದ ಈ ಸಾಧನಗಳ ತಯಾರಿಕೆಯಿಂದ ಸಶಸ್ತ್ರ ಪ‍ಡೆಗಳು ಮತ್ತು ದೇಶೀಯ ಉದ್ಯಮವು ಭಾರಿ ಪ್ರಯೋಜನ ಪಡೆಯಲಿವೆ’ ಎಂದು ಡಿಆರ್‌ಡಿಒ ಅಧ್ಯಕ್ಷ ಜಿ. ಸತೀಶ್‌ ರೆಡ್ಡಿ ಹೇಳಿದ್ದಾರೆ.

ಈ ಸಲಕರಣೆಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ₹20,400 ಕೋಟಿ ವೆಚ್ಚವಾಗಲಿದೆ ಎಂದು ಹೇಳಲಾಗಿದೆ.ಗಡಿಯಲ್ಲಿನ ಪರಿಸ್ಥಿತಿಯನ್ನು
ಅರಿತುಕೊಳ್ಳುವುದಕ್ಕಾಗಿ ರಾಜನಾಥ್‌ ಅವರು ಲೇಹ್‌ಗೆ ಭೇಟಿ ನೀಡುವ ಮುನ್ನಾದಿನ, ₹38,900 ಕೋಟಿಯ ಈ ಖರೀದಿ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.


ಎಂಎಸ್‌ಎಂಇಗಳಿಗೆ ದೊಡ್ಡ ಪಾಲು
‘ಈಗಿನ ಖರೀದಿ ನಿರ್ಧಾರವು ದೇಶೀಯ ವಿನ್ಯಾಸ ಮತ್ತು ಅಭಿವೃದ್ಧಿಗೆ ಒತ್ತು ನೀಡಿದೆ. ಭಾರತದ ರಕ್ಷಣಾ ಉದ್ಯಮದ ಈ ತಯಾರಿಕೆಯಲ್ಲಿ ಸಣ್ಣ, ಅತಿಸಣ್ಣ, ಮತ್ತು ಮಧ್ಯಮ ಗಾತ್ರದ (ಎಂಎಸ್‌ಎಂಇ) ಕೈಗಾರಿಕೆಗಳು ಭಾಗಿಯಾಗಲಿವೆ’ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಕೆಲವು ಯೋಜನೆಗಳಲ್ಲಿ ಒಟ್ಟು ವೆಚ್ಚದ ಶೇ 80ರಷ್ಟು ಮೌಲ್ಯದ ಸಲಕರಣೆಗಳು ದೇಶೀಯವಾಗಿ ತಯಾರಾಗಲಿವೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ತಂತ್ರಜ್ಞಾನ ವರ್ಗಾವಣೆ ಮಾಡುವುದರಿಂದ ಇದು ಸಾಧ್ಯವಾಗಲಿದೆ ಎಂದು ತಿಳಿಸಿದೆ.

ಆರ್ಥಿಕ ದಿಗ್ಬಂಧನ ಭೀತಿ
ರಷ್ಯಾ ಜತೆ ಯುದ್ಧವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿರುವ ಭಾರತದ ಮೇಲೆ ಅಮೆರಿಕವು ಆರ್ಥಿಕ ದಿಗ್ಬಂಧನ ಹೇರುವ ಅಪಾಯವಿದೆ. ‘ಅಮೆರಿಕವು ತನ್ನ ಮೇಲೆ ದಿಗ್ಬಂಧನ ಹೇರುವುದಿಲ್ಲ’ ಎಂಬ ನಿರೀಕ್ಷೆಯಲ್ಲಿ ಭಾರತ ಇದೆ.

2016ರ ಅಮೆರಿಕ ಅಧ್ಯಕ್ಷರ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿದ ಆರೋಪದಲ್ಲಿ, ಅಮೆರಿಕವು ರಷ್ಯಾ ಮೇಲೆ ಕಾಸ್ಟಾ ಕಾಯ್ದೆ ಅಡಿ ದಿಗ್ಬಂಧನ ಹೇರಿದೆ. ರಕ್ಷಣೆ, ತೈಲ ಕ್ಷೇತ್ರಗಳಲ್ಲಿರಷ್ಯಾ ಜತೆ ಒಪ್ಪಂದ ಮಾಡಿಕೊಳ್ಳುವ ರಾಷ್ಟ್ರಗಳ ಮೇಲೂ ದಿಗ್ಬಂಧನ ಹೇರಲು ಕಾಯ್ದೆಯಲ್ಲಿ ಅವಕಾಶವಿದೆ.

ಈ ದಿಗ್ಬಂಧನದಿಂದ ವಿನಾಯಿತಿ ನೀಡುವಂತೆ ಭಾರತವು ಅಮೆರಿಕಕ್ಕೆಈಗಾಗಲೇ ಮನವಿ ಸಲ್ಲಿಸಿದ್ದರೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ವಾಷಿಂಗ್ಟನ್‌ನಲ್ಲಿನ ಭಾರತದ ರಾಯಭಾರಿ ತರಣ್‌‌ಜಿತ್ ಸಿಂಗ್ ಸಂಧು ಅವರು ಅಮೆರಿಕದ ವಿದೇಶಾಂಗ ಉಪಕಾರ್ಯದರ್ಶಿ ಸ್ಟೀಫನ್ ಬೀಗನ್ ಜತೆ ಸಭೆ ನಡೆಸಲಿದ್ದಾರೆ.

**
* 21 ಮಿಗ್‌–29 ಯುದ್ಧ ವಿಮಾನಗಳು (ರಷ್ಯಾದಿಂದ ಖರೀದಿ)

* ₹7,418 ಕೋಟಿ (ಅಂದಾಜು ವೆಚ್ಚ)

* 59 ಮಿಗ್‌–29 ಯುದ್ಧ ವಿಮಾನಗಳನ್ನು ಮೇಲ್ದರ್ಜೆಗೆ ಏರಿಸುವುದು

* 12 ಎಸ್‌ಯು–30– ಎಂಕೆಐ ವಿಮಾನಗಳು (ಬೆಂಗಳೂರಿನ ಎಚ್‌ಎಎಲ್‌ನಿಂದ ಖರೀದಿ)

* ₹10,730 ಕೋಟಿ (ಅಂದಾಜು ವೆಚ್ಚ)

* ₹ 20,400 ಕೋಟಿ

ವಿವಿಧ ಶಸ್ತ್ರಾಸ್ತ್ರಗಳ ದೇಶೀಯ ವಿನ್ಯಾಸ ಮತ್ತು ಅಭಿವೃದ್ಧಿ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.