ADVERTISEMENT

ಗೂಢಚಾರಿಕೆ: ಝೆನ್‌ಹುವಾ ಚಟುವಟಿಕೆ ಅಧ್ಯಯನಕ್ಕೆ ಸಮಿತಿ ರಚನೆ

ರಾಷ್ಟ್ರಪತಿ, ಪ್ರಧಾನಿ ಸೇರಿ ಭಾರತದ 10 ಸಾವಿರಕ್ಕೂ ಅಧಿಕ ಜನರ ಮೇಲೆ ಗೂಢಚಾರಿಕೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 12:22 IST
Last Updated 18 ಸೆಪ್ಟೆಂಬರ್ 2020, 12:22 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 10 ಸಾವಿರಕ್ಕೂ ಅಧಿಕ ಭಾರತೀಯರ ಮೇಲೆ ಗೂಢಚಾರಿಕೆ ನಡೆಸಿದ ಆರೋಪವಿರುವ ಚೀನಾ ಕಂಪನಿಯ ಚಟುವಟಿಕೆಗಳ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ತಜ್ಞರ ಸಮಿತಿ ರಚಿಸಿದೆ.

ಕೇಂದ್ರ ಸೈಬರ್‌ ಸುರಕ್ಷತೆ ಕಾರ್ಯನಿರ್ದೇಶಕರಾದ ನಿವೃತ್ತ ಲೆ.ಜನರಲ್ ರಾಜೇಶ್‌ ಪಂತ್‌ ನೇತೃತ್ವದಲ್ಲಿ ಈ ಸಮಿತಿ ರಚನೆಯಾಗಿದ್ದು, ಶೇನ್‌ಜೆನ್‌ ಮೂಲದ ಝೆನ್‌ಹುವಾ ಡಾಟಾ ಇನ್ಫಾರ್ಮೇಷನ್‌ ಟೆಕ್ನಾಲಜಿ ಕಂಪನಿಯ ಚಟುವಟಿಕೆಗಳನ್ನು ವಿಸ್ತೃತವಾಗಿ ಅಧ್ಯಯನ ನಡೆಸಲು ಸೂಚಿಸಲಾಗಿದೆ.

30 ದಿನದೊಳಗಾಗಿ ಸಮಿತಿಯು ತನ್ನ ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಕಂಪನಿಯು ‘ದಿ ಓವರ್‌ಸೀಸ್‌ ಕೀ ಇನ್ಫಾರ್ಮೇಷನ್‌ ಡೇಟಾಬೇಸ್‌(ಒಕೆಐಡಿಬಿ)’ ರಚಿಸಿ ಇದರಲ್ಲಿ ಚೀನಾದ ಹೊರಗೆ ವಾಸಿಸುವ ಜನರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದೆ ಎನ್ನುವ ವರದಿ ಪ್ರಕಟವಾಗಿತ್ತು. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಮೇಲೆಯೂ ಗೂಢಚಾರಿಕೆ ನಡೆಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿತ್ತು.

ADVERTISEMENT

ಬುಧವಾರ, ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ನಾಯಕ ಕೆ.ಸಿ.ವೇಣುಗೋಪಾಲ್‌ ಅವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ‘ಈ ವಿಷಯವನ್ನು ನಾವು ಇಲ್ಲಿರುವ ಚೀನಾದ ರಾಯಭಾರಿ ಜೊತೆ ಚರ್ಚಿಸಿದ್ದೇವೆ. ಚೀನಾದಲ್ಲಿ ಇರುವ ಭಾರತೀಯ ರಾಯಭಾರ ಕಚೇರಿಯೂ ಅಲ್ಲಿನ ವಿದೇಶಾಂಗ ಇಲಾಖೆ ಜೊತೆಗೆ ಈ ಘಟನೆ ಬಗ್ಗೆ ಪ್ರಶ್ನೆ ಎತ್ತಿದೆ. ಆಪ್ತಮೂಲಗಳಿಂದ ತಾವು ಯಾವುದೇ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಿಲ್ಲ ಎಂದು ಝೆನ್‌ಹುವಾ ಕಂಪನಿಯು ಪ್ರಕಟಣೆ ಮುಖಾಂತರ ಸ್ಪಷ್ಟನೆ ನೀಡಿದೆ. ಭಾರತೀಯ ನಾಗರಿಕರ ವೈಯಕ್ತಿಕ ಮಾಹಿತಿ ಹಾಗೂ ಗೋಪ್ಯತೆಯ ರಕ್ಷಣೆ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.