ADVERTISEMENT

ದಿವಂಗತ ಬಿಪಿನ್ ರಾವತ್ ಸ್ಮರಣಾರ್ಥ ಎರಡು ಟ್ರೋಫಿ ಘೋಷಿಸಿದ ನೌಕಾಪಡೆ

ಪಿಟಿಐ
Published 16 ಮಾರ್ಚ್ 2023, 7:45 IST
Last Updated 16 ಮಾರ್ಚ್ 2023, 7:45 IST
ಬಿಪಿನ್‌ ರಾವತ್‌
ಬಿಪಿನ್‌ ರಾವತ್‌   

ನವದೆಹಲಿ: ಭಾರತೀಯ ಸಶಸ್ತ್ರ ಪಡೆಗಳ ಮೊದಲ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್‌ ಅವರ ಸ್ಮರಣಾರ್ಥವಾಗಿ ಭಾರತೀಯ ನೌಕಾಪಡೆಯು ಎರಡು ಟ್ರೋಫಿಗಳನ್ನು ನೀಡುವುದಾಗಿ ಘೋಷಿಸಿದೆ.

ಗುರುವಾರ ನಡೆದ ರಾವತ್ ಅವರ 65ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ನೌಕಾಪಡೆ ಈ ಘೋಷಣೆ ಮಾಡಿದೆ.

ಮೊದಲ ಟ್ರೋಫಿಯನ್ನು ನೌಕಾಪಡೆಯ ಮುಖ್ಯಸ್ಥ ಆರ್‌. ಹರಿಕುಮಾರ್ ಅವರು, ಮಾರ್ಚ್‌ 2 ರಂದು ಮೊದಲ ಮಹಿಳಾ ಅಗ್ನಿವೀರ್‌ಗೆ ಪ್ರಧಾನ ನಾವಿಕರ ತರಬೇತಿ ಕೇಂದ್ರ ಐಎನ್‌ಎಸ್‌ ಚಿಲ್ಕಾದಲ್ಲಿ ಪ್ರದಾನ ಮಾಡುತ್ತಾರೆ ಎಂದು ನೌಕಪಡೆಯ ವಕ್ತಾರ ಕಮಾಂಡರ್‌ ವಿವೇಕ್‌ ಮದ್‌ವಾಲ್‌ ಬುಧವಾರ ಹೇಳಿದ್ದಾರೆ.

ADVERTISEMENT

ಎರಡನೇ ಬಿಪಿನ್‌ ರಾವತ್‌ ಟ್ರೋಫಿಯನ್ನು ಗೋವಾದ ನಾವಲ್‌ ವಾರ್‌ ಕಾಲೇಜ್‌ (ಎನ್‌ಡಬ್ಲ್ಯೂಸಿ)ನಲ್ಲಿ ನೌಕಾಪಡೆಯ ಉನ್ನತ ಅಧಿಕಾರದಲ್ಲಿರುವ ‘ಅತ್ಯಂತ ಹುರುಪಿನ ಅಧಿಕಾರಿ’ಗೆ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಡಿಸೆಂಬರ್‌ 8, 2021ರಂದು ತಮಿಳುನಾಡಿನ ಕುನೂರು ಬಳಿ ನಡೆದ ಹೆಲಿಕಾಪ್ಟರ್‌ ದುರಂತದಲ್ಲಿ ಜನರಲ್‌ ರಾವತ್‌, ಪತ್ನಿ ಮಧುಲಿಕಾ ಸೇರಿದಂತೆ ಇತರ 12 ಸೇನಾ ಸಿಬ್ಬಂದಿ ಮೃತಪಟ್ಟಿದ್ದರು.

‘ಮಾರ್ಚ್ 16 ರಂದು ಅವರ 65 ನೇ ಜನ್ಮ ಜಯಂತಿಯ ಸಂದರ್ಭದಲ್ಲಿ, ಭಾರತೀಯ ನೌಕಾಪಡೆಯು ಭಾರತೀಯ ಸಶಸ್ತ್ರ ಪಡೆಗಳ ಮೊದಲ ಮುಖ್ಯಸ್ಥ ದಿವಂಗತ ಜನರಲ್ ಬಿಪಿನ್ ರಾವತ್ ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತದೆ’ ಎಂದು ನೌಕಪಡೆಯು ಹೇಳಿಕೆಯಲ್ಲಿ ತಿಳಿಸಿದೆ.

ತಮ್ಮ 4 ದಶಕಗಳ ಸೇನಾ ವೃತ್ತಿ ಜೀವನದಲ್ಲಿ ವೃತ್ತಿಪರತೆ, ತಾತ್ವಿಕತೆ, ನಿರ್ಣಯ ಕೈಗೊಳ್ಳುವ ಸಮರ್ಥ ನಾಯಕರಾಗಿ ರಾವತ್ ಹೆಸರಾಗಿದ್ದರು ಎಂದು ನೌಕಾಪಡೆ ಬಣ್ಣಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.