ADVERTISEMENT

ಅಮೆರಿಕದಲ್ಲಿ ಭಾರತೀಯರಿಗೆ ತೊಂದರೆಯಾದರೂ ಮೋದಿ ಮೌನವಾಗಿದ್ದಾರೆ: ಕಾಂಗ್ರೆಸ್‌

ಪಿಟಿಐ
Published 10 ಜೂನ್ 2025, 7:37 IST
Last Updated 10 ಜೂನ್ 2025, 7:37 IST
   

ನವದೆಹಲಿ: ವಿಮಾನ ನಿಲ್ದಾಣವೊಂದರಲ್ಲಿ ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗೆ ಕೈಕೋಳ ತೊಡಿಸಿ, ಅವರನ್ನು ನೆಲದ ಮೇಲೆ ಎಳೆದಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಕಾಂಗ್ರೆಸ್‌ ಪಕ್ಷವು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಅಮೆರಿಕದಲ್ಲಿರುವ ಭಾರತೀಯರನ್ನು ಟ್ರಂಪ್‌ ಸರ್ಕಾರವು ಕೆಟ್ಟದ್ದಾಗಿ ನೆಡೆಸಿಕೊಳ್ಳುತ್ತಿದೆ. ತಕ್ಷಣವೇ ಪ್ರಧಾನಿ ನರೇಂದ್ರ ಮೋದಿಯವರು ಈ ಕುರಿತು ಟ್ರಂಪ್‌ ಜೊತೆ ಮಾತನಾಡಿ ವಿಷಯವನ್ನು ತಿಳಿಗೊಳಿಸಬೇಕು ಎಂದು ಆಗ್ರಹಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಘಟನೆಗೆ ಸಂಬಂಧಿಸಿದ ವಿಡಿಯೊಗಳು ಹರಿದಾಡಲು ಶುರುವಾದ ತಕ್ಷಣವೇ ಪ್ರತಿಕ್ರಿಯಿಸಿರುವ ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು, ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತದ ಜೊತೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ADVERTISEMENT

ದೇಶದ ಗೌರವವನ್ನು ಕಾಪಾಡುವುದು ಹಾಗೂ ದೇಶದ ನಾಗರಿಕರ ರಕ್ಷಣೆಯು ಪ್ರಧಾನಿಯವರ ಹೊಣೆಯಾಗಿದೆ. ಆದರೆ, ಮೋದಿ ಸರ್ಕಾರವು ಭಾರತದ ಗೌರವ ಮತ್ತು ಭಾರತೀಯರ ರಕ್ಷಣೆಯ ವಿಷಯದಲ್ಲಿ ನಿರಂತರವಾಗಿ ಸೋಲುತ್ತಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಅಮೆರಿಕದಲ್ಲಿ ಭಾರತೀಯ ನಾಗರಿಕರು ಹಾಗೂ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ಪ್ರಧಾನಿ ಮೋದಿ ಈ ವಿಷಯದ ಕುರಿತು ಮೌನವಹಿಸಿದ್ದಾರೆ. ಅವರಿಗೆ ಈ ವಿಷಯದ ಕುರಿತು ಮಾತನಾಡಲು ಧೈರ್ಯವಿಲ್ಲ ಎನ್ನುವುದನ್ನು ಅವರ ಮೌನವೇ ಸೂಚಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಅಮೆರಿಕವು ಭಾರತೀಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ವಿಡಿಯೊ ಹಾಗೂ ಫೋಟೊಗಳನ್ನು ಕಾಂಗ್ರೆಸ್‌ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.