ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭಾರತದ ಟೆಕಿಗಳ ಬಹಿರಂಗ ಪತ್ರ

ಪಿಟಿಐ
Published 27 ಡಿಸೆಂಬರ್ 2019, 14:29 IST
Last Updated 27 ಡಿಸೆಂಬರ್ 2019, 14:29 IST
   

ನವದೆಹಲಿ: ಗೂಗಲ್, ಉಬರ್, ಅಮೆಜಾನ್ ಮತ್ತು ಫೇಸ್‌ಬುಕ್‌ನಂಥ ದೈತ್ಯ ತಂತ್ರಜ್ಞಾನ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿರುವ ಭಾರತೀಯ ಮತ್ತು ಭಾರತ ಮೂಲದ ವೃತ್ತಿಪರ ಟೆಕಿಗಳ ಗುಂಪೊಂದು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ)ವಿರುದ್ಧ ಬಹಿರಂಗ ಪತ್ರವೊಂದನ್ನು ಬರೆದಿದೆ.

ಸಿಎಎ ಮತ್ತು ಎನ್‌ಆರ್‌ಸಿಯನ್ನು ‘ಫ್ಯಾಸಿಸ್ಟ್‌’ ಎಂದು ಈ ಗುಂಪು ಕರೆದಿದ್ದು,ಬೃಹತ್ ಉದ್ಯಮಗಳ ಮುಖಂಡರಾದ ಸುಂದರ್ ಪಿಚ್ಚೈ, ಸತ್ಯ ನಾದೆಲ್ಲಾ ಮತ್ತು ಮುಖೇಶ್ ಅಂಬಾನಿಯಂಥವರು ‘ಒಂದು ನಿಲುವನ್ನು ತೆಗೆದುಕೊಳ್ಳಬೇಕು ಮತ್ತು ಭಾರತ ಸರ್ಕಾರದ ಫ್ಯಾಸಿಸ್ಟ್ ಕೃತ್ಯಗಳನ್ನು ಸಾರ್ವಜನಿಕವಾಗಿ ಖಂಡಿಸಬೇಕು’ ಎಂದು ಒತ್ತಾಯಿಸಿದೆ.

‘ನಾವು ಎಂಜಿನಿಯರ್‌ಗಳು, ಸಂಶೋಧಕರು, ವಿಶ್ಲೇಷಕರು, ವಿನ್ಯಾಸಕಾರರು– ‘ಫ್ಯಾಸಿಸ್ಟ್ ಸರ್ಕಾರವನ್ನು ಮತ್ತು ಅದು ನಾಗರಿಕರ ಮೇಲೆ ಹೇರುವ ಕ್ರೂರತೆಯನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತೇವೆ. ಪ್ರತಿಭಟನಕಾರ ಮೇಲೆ ನಡೆಯುತ್ತಿರುವ ಸರ್ಕಾರಿ ಪ್ರಾಯೋಜಿತ ಹಿಂಸಾಚಾರ ತಕ್ಷಣವೇ ನಿಲ್ಲಬೇಕು’ ಎಂದು ಗುಂಪು ಬಹಿರಂಗ ಪತ್ರದಲ್ಲಿ ಒತ್ತಾಯಿಸಿದೆ.

ADVERTISEMENT

‘ಈ ನೌಕರರು ಸ್ಯಾನ್‌ಫ್ರಾನ್ಸಿಸ್ಕೊ, ಸಿಯಾಟಲ್, ಲಂಡನ್, ಇಸ್ರೇಲ್ ಮತ್ತು ಬೆಂಗಳೂರಿನಲ್ಲಿ ನೆಲೆಸಿರುವವರು ಎಂದು ಹೇಳಿಕೊಂಡಿರುವ ಗುಂಪು, ಇಲ್ಲಿನ ಅಭಿಪ್ರಾಯಗಳು ತಮ್ಮ ವೈಯಕ್ತಿಕ ನಿಲುವುಗಳಾಗಿದ್ದು, ನಮ್ಮ ಉದ್ಯೋಗದಾತರ ನಿಲುವು–ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ’ ಎಂದು ಗುಂಪು ಸ್ಪಷ್ಟಪಡಿಸಿದೆ.

ವಿದ್ಯಾರ್ಥಿಗಳ ಪ್ರತಿಭಟನೆ

ಮುಂಬೈ: ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸಿ ಮುಂಬೈನ ಆಜಾದ್ ಮೈದಾನದಲ್ಲಿ ಶುಕ್ರವಾರ ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.