ADVERTISEMENT

ಗಡಿಯಲ್ಲಿ ಸೇನೆಯೂ ನಿಂತಿರುತ್ತೆ, ಮಾತುಕತೆಯೂ ಮುಂದುವರಿಯುತ್ತೆ: ರಾಜನಾಥ್ ಸಿಂಗ್

ಪಿಟಿಐ
Published 29 ಅಕ್ಟೋಬರ್ 2020, 2:47 IST
Last Updated 29 ಅಕ್ಟೋಬರ್ 2020, 2:47 IST
ಸೇನಾ ಕಮಾಂಡರ್‌ಗಳ ಸಮಾವೇಶದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಸೇನಾ ಕಮಾಂಡರ್‌ಗಳ ಸಮಾವೇಶದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್   

ನವದೆಹಲಿ: ದೇಶದ ಸಾರ್ವಭೌಮತೆ ಮತ್ತು ಏಕತೆಯನ್ನು ಕಾಪಾಡುವ ನಿಟ್ಟಿನಲ್ಲಿಸೇನೆಯ ಪರಿಶ್ರಮವನ್ನು ಶ್ಲಾಘಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪೂರ್ವ ಲಡಾಖ್‌ನಲ್ಲಿ ಭಾರತೀಯ ಸೈನಿಕರು ದೃಢವಾಗಿ ನಿಂತಿರುತ್ತಾರೆ. ಚೀನಾದೊಂದಿಗಿನ ಮಾತುಕತೆಗಳೂ ಮುಂದುವರಿಯಲಿವೆ ಎಂದು ಹೇಳಿದರು.

ಸೇನೆಯ ಹಿರಿಯ ಕಮಾಂಡರ್‌ ಸಮಾವೇಶದಲ್ಲಿ ಬುಧವಾರ ಮಾತನಾಡಿದ ಅವರು, 'ಸೇನೆಯು ನಮ್ಮ ದೇಶದ ಅತ್ಯಂತ ವಿಶ್ವಾಸಾರ್ಹ ಮತ್ತು ಸ್ಫೂರ್ತಿದಾಯಕ ಸಂಸ್ಥೆಯಾಗಿದೆ. ಹವಾಮಾನ ವೈಪರಿತ್ಯದ ನಡುವೆಯೂ ಶತ್ರುಸೇನೆಯ ಉಪಟಳಗಳ ವಿರುದ್ಧ ಹೋರಾಡುತ್ತಿರುವನಮ್ಮ ಸೈನಿಕರಿಗೆ ಅತ್ಯುತ್ತಮ ಶಸ್ತ್ರಾಸ್ತ್ರಗಳು, ಉಪಕರಣಗಳು ಮತ್ತು ಅಗತ್ಯ ವಸ್ತ್ರಗಳನ್ನು ನೀಡುವುದು ರಾಷ್ಟ್ರೀಯ ಕರ್ತವ್ಯವಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.

'ಸೈನಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಹಣಕಾಸಿನ ಅಡೆತಡೆಯಿಲ್ಲ. ಎಲ್ಲ ಕ್ಷೇತ್ರಗಳಲ್ಲಿಯೂ ನಮ್ಮ ಸೈನಿಕರು ಮೇಲುಗೈ ಸಾಧಿಸುವಂತೆ ಮಾಡಲು ಸರ್ಕಾರ ಲಭ್ಯವಿರುವ ಎಲ್ಲ ಅವಕಾಶಗಳನ್ನೂ ಬಳಸಿಕೊಳ್ಳಲಿದೆ' ಎಂದರು.

ADVERTISEMENT

'ಪ್ರಸ್ತುತ ಸಂದರ್ಭದಲ್ಲಿ ಎದುರಾಗಿರುವ ಸವಾಲುಗಳನ್ನು ಎದುರಿಸಲು ಸೇನೆ ತೆಗೆದುಕೊಂಡಿರುವ ನಿರ್ಧಾರಗಳು ಮತ್ತು ಅದರ ಕಾರ್ಯಾಚರಣೆ ಸನ್ನದ್ಧತೆಯ ಬಗ್ಗೆ ನನಗೆ ಹೆಮ್ಮೆಯಿದೆ' ಎಂದು ರಾಜನಾಥ್‌ ಸಿಂಗ್ ಹೇಳಿದರು.

ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ಸ್‌, ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್ ಮತ್ತು ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ಕಮಾಂಡ್‌ಗಳ ಅಗತ್ಯದ ಬಗ್ಗೆ ರಾಜನಾಥ್ ಸಿಂಗ್‌ ಒತ್ತಿ ಹೇಳಿದರು. ಭಾರತದ ಸಶಸ್ತ್ರ ಪಡೆಗಳು ಮುಂದಿನ ದಿನಗಳಲ್ಲಿ ಸವಾಲು ಎದುರಿಸುವ ವಿಚಾರದಲ್ಲಿ ಇವು ಮಹತ್ವದ ಪಾತ್ರ ನಿರ್ವಹಿಸುತ್ತವೆ ಎಂದರು.

ಗಾಲ್ವಾನ್ ಕಣಿವೆ, ಕಾಶ್ಮೀರ ಮತ್ತು ಈಶಾನ್ಯ ಭಾರತದಲ್ಲಿ ಮಾತೃಭೂಮಿಯ ರಕ್ಷಣೆಗಾಗಿ ಹುತಾತ್ಮರಾದ ಯೋಧರನ್ನು ಸಚಿವರು ಸ್ಮರಿಸಿದರು.

ಉತ್ತರದ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿದೆ. ಒಂದೆಡೆ ನಮ್ಮ ಸೈನಿಕರು ದೃಢವಾಗಿ ನಿಂತಿದ್ದಾರೆ, ಮತ್ತೊಂದೆಡೆ ಶಾಂತಿ ಮಾತುಕತೆಗಳು ಮುಂದುವರಿಯುತ್ತಿವೆ ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.