
ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಬೂತ್ ಮಟ್ಟದ ಅಧಿಕಾರಿಗಳ ಮೇಲೆ ಅತಿಯಾದ ಒತ್ತಡ ಹೇರುತ್ತಿರುವುದನ್ನು ವಿರೋಧಿಸಿ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ.
ಬೂತ್ ಮಟ್ಟದ ಅಧಿಕಾರಿಗಳ ಸಂಘಟನೆಯಾದ ಬಿಎಲ್‌ಒ ಅಧಿಕಾರ ರಕ್ಷಾ ಸಮಿತಿಯ ಸದಸ್ಯರು ಸಮಸ್ಯೆಗಳ ಕುರಿತು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಆರಂಭವಾದಾಗಿನಿಂದ ಜಿಲ್ಲೆಗಳಾದ್ಯಂತ ಬಿಎಲ್‌ಒಗಳು ತುಂಬಾ ಒತ್ತಡದಲ್ಲಿ ಹಾಗೂ ಅಮಾನವೀಯ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಸಮಿತಿ ಆರೋಪಿಸಿದೆ.
ಚುನಾವಣಾ ಆಯೋಗವು ತಕ್ಷಣ ಮಧ್ಯಪ್ರವೇಶಿಸಿ, ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ, ಉತ್ತರ ಕೋಲ್ಕತ್ತದ ಕಾಲೇಜು ಚೌಕದಿಂದ ನಗರದ ಮಧ್ಯ ಭಾಗದಲ್ಲಿರುವ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಕಚೇರಿಯವರೆಗೆ ಮೆರವಣಿಗೆ ನಡೆಸುವುದಾಗಿ ಸಮಿತಿ ತಿಳಿಸಿದೆ.
ವಿವಿಧ ಸಂಘಟನೆಗಳ ಅರೆ-ಶಿಕ್ಷಕರು, ಕಾಲೇಜು ಪ್ರಾಧ್ಯಾಪಕರು ಮತ್ತು ಶಿಕ್ಷಕರು ತಮ್ಮ ಬೇಡಿಕೆಗಳನ್ನು ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.
ಕಡಿಮೆ ಅವಧಿಯಲ್ಲಿ ಕೆಲಸಗಳನ್ನು ಪೂರ್ಣಗೊಳಿಸಲು ನಮಗೆ ಹೇಳಲಾಗಿದೆ. ಆದರೆ ಅವರು ಹಂಚಿರುವ ಕೆಲಸಗಳು ಸುಮಾರು ಎರಡು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ ಎಂದು ಬಿಎಲ್‌ಒ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ನವೆಂಬರ್ 4ರಂದು ಆರಂಭವಾಗಿದ್ದು, ಡಿಸೆಂಬರ್ 4ರವರೆಗೆ ಮುಂದುವರಿಯುತ್ತದೆ. ಕರಡು ಪಟ್ಟಿಗಳನ್ನು ಡಿಸೆಂಬರ್ 9ರಂದು ಪ್ರಕಟಿಸಲಾಗುವುದು ಎಂದು ತಿಳಿದು ಬಂದಿದೆ.
ಚುನಾವಣಾ ಆಯೋಗವು ಎಸ್‌ಐಆರ್ ಪ್ರಕ್ರಿಯೆ ಗಡುವನ್ನು ವಿಸ್ತರಿಸದಿದ್ದರೆ ಅಥವಾ ಬಿಎಲ್‌ಒಗಳು ಸಮಸ್ಯೆಗಳನ್ನು ಪರಿಹರಿಸದಿದ್ದರೆ, ನಿರಂತರ ಪ್ರತಿಭಟನೆ ನಡೆಸುವುದಾಗಿ ಸಮಿತಿಯ ಸದಸ್ಯರು ಎಚ್ಚರಿಕೆ ನೀಡಿದ್ದಾರೆ .
ಡಿಜಿಟಲೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹಾರಿಸಲು ಹೆಚ್ಚುವರಿ ಸಹಾಯಕ ಸಿಬ್ಬಂದಿ ಒದಗಿಸುವಂತೆ ಚುನಾವಣಾ ಆಯೋಗವನ್ನು ಬಿಎಲ್‌ಒ ಸಂಘಟನೆಗಳು ಕೋರಿವೆ.
ಬಿಎಲ್‌ಒಗಳ ಹಾಗೂ ಚುನಾವಣಾ ಅಧಿಕಾರಿಗಳ ಮೇಲೆ ಕೆಲಸದ ಒತ್ತಡ ಹೇರುತ್ತಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. 19 ದಿನಗಳಲ್ಲಿ 16 ಬಿಎಲ್‌ಒಗಳು ಮೃತಪಟ್ಟಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.