
ನವದೆಹಲಿ: ‘ದೇಶದ ಯುವಜನರು ಮತ್ತು ಉದ್ಯಮಿಗಳು ನೈಜ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸಿದ್ದಾರೆ. ಜೊತೆಗೆ ಸ್ಟಾರ್ಟ್‌ಅಪ್ ಇಂಡಿಯಾ ಮಿಷನ್ ಇದೀಗ ಕ್ರಾಂತಿಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
‘ಸ್ಟಾರ್ಟ್‌ಅಪ್ ಇಂಡಿಯಾ’ ಕಾರ್ಯಕ್ರಮಕ್ಕೆ ದಶಕ ತುಂಬಿದ ಪ್ರಯುಕ್ತ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, 2014ರಲ್ಲಿ ದೇಶದಲ್ಲಿ ಬೆರಣಿಕೆಯಷ್ಟು ಯೂನಿಕಾರ್ನ್‌ಗಳು ಮತ್ತು 500 ನವೋದ್ಯಮಗಳು ಇದ್ದವು. ಪ್ರಸ್ತುತ ದೇಶದಲ್ಲಿ 125ಕ್ಕೂ ಹೆಚ್ಚು ಸಕ್ರಿಯ ಯೂನಿಕಾರ್ನ್ ಮತ್ತು 2 ಲಕ್ಷಕ್ಕೂ ಅಧಿಕ ನವೋದ್ಯಮಗಳಿದ್ದು, ಭಾರತವು, ಜಗತ್ತಿನಲ್ಲಿ ಅತಿ ಹೆಚ್ಚು ನವೋದ್ಯಮ ಹೊಂದಿದ ಮೂರನೇ ರಾಷ್ಟ್ರವಾಗಿದೆ. ಯೂನಿಕಾರ್ನ್‌ಗಳು ಐಪಿಒ ಆರಂಭಿಸಿ, ಉದ್ಯೋಗ ಸೃಷ್ಟಿ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ಎರಡು ಮತ್ತು ಮೂರನೇ ಹಂತದ ನಗರಗಳು, ಗ್ರಾಮೀಣ ಪ್ರದೇಶಗಳಲ್ಲಿನ ಯುವಜನರು ಸ್ವಂತವಾದ ಉದ್ಯಮಗಳನ್ನು ಸ್ಥಾಪಿಸುತ್ತಿದ್ದಾರೆ. ಶೇ 45ರಷ್ಟು ನವೋದ್ಯಮಗಳು ಒಬ್ಬ ಮಹಿಳಾ ನಿರ್ದೇಶಕಿ ಅಥವಾ ಮಹಿಳಾ ಪಾಲುದಾರರನ್ನು ಹೊಂದಿವೆ ಎಂದು ಹೇಳಿದ್ದಾರೆ.
ಭಾರತವು ತನ್ನ ನವೋದ್ಯಮಗಳ ನಾವೀನ್ಯ ಮತ್ತು ವಿಶ್ವಾಸದಲ್ಲಿ ಸಂಪೂರ್ಣ ನಂಬಿಕೆಯನ್ನು ಹೊಂದಿದೆ. ಮುಂಬರುವ 10 ವರ್ಷಗಳಲ್ಲಿ ಭಾರತವು, ನವೋದ್ಯಮ ಮತ್ತು ತಂತ್ರಜ್ಞಾನದಲ್ಲಿ ಜಗತ್ತನ್ನು ಮುನ್ನಡೆಸುವುದು ನಮ್ಮ ಗುರಿಯಾಗಿರಬೇಕು ಎಂದು ಹೇಳಿದ್ದಾರೆ.
2016ರ ಜನವರಿ 16ರಂದು ಸ್ಟಾರ್ಟ್‌ಅಪ್ ಇಂಡಿಯಾ ಕಾರ್ಯಕ್ರಮ ಆರಂಭವಾಯಿತು. ಶುಕ್ರವಾರ ಈ ಕಾರ್ಯಕ್ರಮಕ್ಕೆ ದಶಕ ಪೂರೈಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.