ADVERTISEMENT

ಉಪಗ್ರಹ ನಾಶದ ‘ಶಕ್ತಿ’ ಕರಗತ

ಚುನಾವಣಾ ನೀತಿ ಸಂಹಿತೆ ನಡುವೆಯೇ ಬಾಹ್ಯಾಕಾಶ ಸಾಧನೆ ಘೋಷಣೆಗೆ ವಿಪಕ್ಷಗಳ ಆಕ್ಷೇಪ

ಏಜೆನ್ಸೀಸ್
Published 27 ಮಾರ್ಚ್ 2019, 19:53 IST
Last Updated 27 ಮಾರ್ಚ್ 2019, 19:53 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ:ಬಾಹ್ಯಾಕಾಶದಲ್ಲಿರುವ ಉಪಗ್ರಹವನ್ನು ಹೊಡೆದು ಉರುಳಿಸುವ ಉಪಗ್ರಹ ನಿರೋಧಕ ಕ್ಷಿಪಣಿಯ (ಎ–ಸ್ಯಾಟ್) ಪರೀಕ್ಷೆಯನ್ನು ಭಾರತವು ಯಶಸ್ವಿಯಾಗಿ ನಡೆಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಮಧ್ಯಾಹ್ನ ಘೋಷಿಸಿದರು. ವಿಜ್ಞಾನಿಗಳ ಸಾಧನೆಯ ಶ್ರೇಯವನ್ನು ಪ್ರಧಾನಿಯವರು ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಸಾಧನೆಯನ್ನು ಮೋದಿ ತಮ್ಮದೆಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಮಿಷನ್‌ ಶಕ್ತಿ:ಈ ಕಾರ್ಯಾಚರಣೆಯನ್ನು ‘ಮಿಷನ್‌ ಶಕ್ತಿ’ ಎಂದು ಕರೆಯಲಾಗಿದೆ.ಈವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಈ ಸಾಮರ್ಥ್ಯ ಹೊಂದಿದ್ದವು. ಈಗ ಆ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ.

ADVERTISEMENT

‘ಭಾರತವು ಉಪಗ್ರಹ ನಿರೋಧಕ ಕ್ಷಿಪಣಿಯ ಪ್ರಾತ್ಯಕ್ಷಿಕೆಯನ್ನು ಯಶಸ್ವಿಯಾಗಿ ನಡೆಸಿದೆ. ಬಾಹ್ಯಾಕಾಶದಲ್ಲಿ 300 ಕಿ.ಮೀ. ಎತ್ತರದ ಕಕ್ಷೆಯಲ್ಲಿದ್ದ ಉಪಗ್ರಹವನ್ನು ನಮ್ಮ ಕ್ಷಿಪಣಿ ಹೊಡೆದು ಉರುಳಿಸಿದೆ. ಇದು ಯಾವುದೇ ದೇಶದ ವಿರುದ್ಧದ ಕಾರ್ಯಾಚರಣೆ ಅಲ್ಲ. ಈ ಕಾರ್ಯಾಚರಣೆ ಮೂಲಕ ನಾವು ಯಾವುದೇ ಅಂತರರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿಲ್ಲ’ ಎಂದು ಪ್ರಧಾನಿ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿಹೇಳಿದರು.

‘ಇದು ಅತ್ಯಂತ ಸಂಕೀರ್ಣ ಮತ್ತು ಕಠಿಣ ಕಾರ್ಯಾಚರಣೆಯಾಗಿತ್ತು. ಆದರೆ ಇಡೀ ಕಾರ್ಯಾಚರಣೆ ಮೂರೇ ನಿಮಿಷಗಳಲ್ಲಿ ಪೂರ್ಣಗೊಂಡಿತು’ ಎಂದರು.

ಪರಿಶೀಲನೆಗೆ ಸಮಿತಿ

ಪ್ರಧಾನಿಯು ರಾಷ್ಟ್ರವನ್ನು ಉದ್ದೇಶಿಸಿ ಟಿ.ವಿ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಭಾಷಣ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಚುನಾವಣಾ ನೀತಿ ಸಂಹಿತೆಯನ್ನು ಪ್ರಧಾನಿ ಉಲ್ಲಂಘಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಸಮಿತಿ ರಚಿಸಲಾಗಿದೆ’ ಎಂದು ಚುನಾವಣಾ ಆಯೋಗ ಹೇಳಿದೆ.

*ಇದು ಸಂಪೂರ್ಣ ದೇಶೀಯ ತಂತ್ರಜ್ಞಾನ. ಭಾರತವು ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ‘ಸೂಪರ್ ಪವರ್’ ಆಗಿದೆ. ಈ ಸಾಧನೆ ಭಾರತದ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ

– ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.