ADVERTISEMENT

ಅಫ್ಗಾನಿಸ್ತಾನದಿಂದ ಭಾರತೀಯರ ಸ್ಥಳಾಂತರ ಕಾರ್ಯಾಚರಣೆ: 'ಆಪರೇಷನ್ ದೇವಿ ಶಕ್ತಿ'

ಪಿಟಿಐ
Published 24 ಆಗಸ್ಟ್ 2021, 9:58 IST
Last Updated 24 ಆಗಸ್ಟ್ 2021, 9:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ತಾಲಿಬಾನ್ ಹಿಡಿತದಲ್ಲಿರುವ ಅಪ್ಗಾನಿಸ್ತಾನದ ಕಾಬೂಲ್‌ನಿಂದ ತನ್ನ ನಾಗರಿಕರು ಮತ್ತು ಅಫ್ಗನ್ ಸಿಖ್ಖರನ್ನು ಮತ್ತು ಹಿಂದೂಗಳನ್ನು ಸ್ಥಳಾಂತರಿಸುವ ಭಾರತದ ಕಾರ್ಯಾಚರಣೆಗೆ 'ಆಪರೇಷನ್ ದೇವಿ ಶಕ್ತಿ' ಎಂದು ಹೆಸರಿಸಲಾಗಿದೆ.

ಭಾರತವು ಮಂಗಳವಾರ ಅಫ್ಗನ್‌ನ ಸಿಖ್ಖರು ಮತ್ತು ಹಿಂದೂಗಳು ಸೇರಿದಂತೆ ತನ್ನ 78 ಪ್ರಜೆಗಳನ್ನು ತಜಕಿಸ್ತಾನದ ರಾಜಧಾನಿ ದುಶಾಂಬೆಯಿಂದ ಕರೆತಂದಿತು. ಈ ವಿಚಾರವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ, ಕಾರ್ಯಾಚರಣೆಗೆ 'ಆಪರೇಷನ್ ದೇವಿ ಶಕ್ತಿ' ಎಂಬ ಹೆಸರಿಟ್ಟಿರುವುದಾಗಿಯೂ ಅವರು ತಿಳಿಸಿದ್ದಾರೆ.

'ಆಪರೇಷನ್ ದೇವಿ ಶಕ್ತಿ ಮುಂದುವರಿದಿದೆ. ಕಾಬೂಲ್‌ನಿಂದ ಸ್ಥಳಾಂತರಗೊಳ್ಳುವ 78 ಮಂದಿ ದುಶಾಂಬೆ ಮೂಲಕ ಆಗಮಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಭಾರತೀಯ ವಾಯುಪಡೆ, ಏರ್ ಇಂಡಿಯಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಿಬ್ಬಂದಿಯ ಅವಿರತ ಪ್ರಯತ್ನಕ್ಕೆ ಅಭಿನಂದನೆಗಳು' #DeviShakti ಎಂದವರು ಟ್ವೀಟ್ ಮಾಡಿದ್ದಾರೆ.

ADVERTISEMENT

ಅಫ್ಗನ್ ರಾಜಧಾನಿಯನ್ನು ತಾಲಿಬಾನ್ ವಶಪಡಿಸಿಕೊಂಡ ಒಂದು ದಿನದ ನಂತರ ಆ. 16ರಂದು ಕಾಬೂಲ್‌ನಿಂದ ದೆಹಲಿಗೆ 40 ಭಾರತೀಯರನ್ನು ಏರ್‌ಲಿಫ್ಟ್ ಮಾಡುವ ಮೂಲಕ ಭಾರತವು ಸ್ಥಳಾಂತರ ಕಾರ್ಯಾಚರಣೆಯನ್ನು ಆರಂಭಿಸಿತು. ಕಾಬೂಲ್‌ನಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ನಡುವೆ ಇಲ್ಲಿಯವರೆಗೆ ಭಾರತವು 800ಕ್ಕೂ ಹೆಚ್ಚು ಜನರನ್ನು ಅಲ್ಲಿಂದ ಸ್ಥಳಾಂತರಿಸಿದೆ.

ಅಫ್ಗಾನಿಸ್ತಾನದಲ್ಲಿನ ಸ್ಥಿತಿಗತಿ ಕುರಿತ ಕ್ಯಾಬಿನೆಟ್ ಸಮಿತಿ ಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಆ. 17ರಂದು ಅಫ್ಗಾನಿಸ್ತಾನದಿಂದ ಎಲ್ಲ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದು ಮತ್ತು ಭಾರತಕ್ಕೆ ಬರಲು ಬಯಸುವ ಅಫ್ಗನ್ ಸಿಖ್ ಮತ್ತು ಹಿಂದೂಗಳಿಗೆ ಆಶ್ರಯ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.